ಸರ್ಕಾರ ಅಸ್ಥಿರ ಯತ್ನ ವಿರೋಧಿಸಿ  ಶೋಷಿತ ಒಕ್ಕೂಟದ ಪ್ರತಿಭಟನೆ

1000297330.jpg
Published on

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿರುವುದನ್ನು ವಿರೋಧಿಸಿ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರ ಉರುಳಿಸಲು ಹುನ್ನಾರ ನಡೆಸಿರುವ ಬಿಜೆಪಿ-ಜೆಡಿಎಸ್ ಪಕ್ಷಗಳ ವಿರುದ್ಧ ಭಿತ್ತಿಪತ್ರ ಹಿಡಿದು ಧಿಕ್ಕಾರ ಕೂಗಿದರು.
ಡೊಳ್ಳು ಹಾಗೂ ತಮಟೆ ಬಾರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರದ ಬಾವುಟ ಹಿಡಿದು ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪಿ.ಬಿ.ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಬಹಿರಂಗ ಸಭೆ ನಡೆಸಿದರು.
ರಾಜ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರ ದಾಹದಿಂದ ಜನಪರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹುದೊಡ್ಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಾಗೂ ವಾಲ್ಮೀಕಿ ನಿಗಮದ ವಿವಾದದಲ್ಲಿ ಸಿಎಂ ಹೆಸರನ್ನು ತಳಕು ಹಾಕುವ ಮೂಲಕ ಹಿಂದುಳಿದ ವರ್ಗದ ನಾಯಕತ್ವ ಕೊನೆಗಾಣಿಸುವ ಮೂಲಕ ಈ ವರ್ಗದವರನ್ನು ಶಾಶ್ವತವಾಗಿ ಅಧಿಕಾರದಿಂದ ದೂರವಿಡಲು ಹುನ್ನಾರ ನಡೆಸಲಾಗಿದೆ ಎಂದು ಆಪಾದಿಸಿದರು.
ಸುಮಾರು 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಹಲವು ಮಹತ್ವದ ಹುದ್ದೆ ನಿಭಾಯಿಸಿರುವ ಸಿದ್ದರಾಮಯ್ಯ ಅವರು, ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸರ್ಕಾರ ದುರ್ಬಲಗೊಳಿಸುವ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ರಾಜ್ಯಪಾಲರು ಕೂಲಂಕುಷ ಪರಿಶೀಲನೆ ನಡೆಸದೆ ಹಾಗೂ ತಜ್ಞರ ಅಭಿಪ್ರಾಯ ಪಡೆಯದೆ ಏಕಾಏಕಿ ಶೋಕಾಸ್ ನೀಡಿರುವುದು ಕಾನೂನು ಬಾಹಿರ. ರಾಜ್ಯ ಸರ್ಕಾರ ಸುಸೂತ್ರವಾಗಿ ನಡೆಯಲು ಶೋಕಾಸ್ ನೋಟಿಸನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಒಂದುವೇಳೆ ನೋಟಿಸ್ ಹಿಂಪಡೆಯದಿದ್ದರೆ ರಾಜ್ಯಪಾಲರ ನಡೆ ವಿರೋಧಿಸಿ ಒಕ್ಕೂಟದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಸ್.ಬಸವಂತಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪಾಲಿಕೆ ಸದಸ್ಯರಾದ ಜೆ.ಎನ್.ಶ್ರೀನಿವಾಸ್, ಚಮನ್‌ಸಾಬ್ ಮುಖಂಡರಾದ ಲೋಕಿಕೆರೆ ಸಿದ್ದಪ್ಪ, ಬಿ.ಎಚ್.ಪರಶುರಾಮಪ್ಪ, ಜಿ.ಸಿ.ನಿಂಗಪ್ಪ, ಕೆ.ಪಿ.ಪಾಲಯ್ಯ, ಎನ್.ರುದ್ರಮುನಿ, ಕೆ.ಎನ್.ಮಂಜುನಾಥ್, ಆರ್.ಎಚ್.ನಾಗಭೂಷಣ್, ಎಸ್.ಮಲ್ಲಿಕಾರ್ಜುನ್, ಜಿ.ಬಿ.ವಿನಯ್‌ಕುಮಾರ್, ಇಟ್ಟಿಗುಡಿ ಮಂಜುನಾಥ್, ಹೊನ್ನಾಳಿ ಸಿದ್ದಪ್ಪ, ಅನಿಸ್‌ಪಾಶಾ ಇತರರು ಭಾಗವಹಿಸಿದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net