

ದಾವಣಗೆರೆ: ನಗರದ ಅಭಿನವ ರೇಣುಕ ಮಂದಿರದಲ್ಲಿ ಅಭಿಮಾನಿಗಳ ಬಳಗದಿಂದ ಶನಿವಾರ ಆಯೋಜಿಸಿದ್ದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ 72ನೇ ಜನ್ಮ ದಿನಾಚರಣೆ ಕಾರ್ಯಕ್ರಮ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸೋಲಿನ ಆತ್ಮಾವಲೋಕನದ ಸ್ವರೂಪ ಪಡೆಯಿತು.
ನಮ್ಮವರ ಕುತಂತ್ರದಿಂದ ಸೋಲಾಗಿದೆ. ಪಕ್ಷಕ್ಕೆ ದ್ರೋಹ ಎಸಗಿದವರು ಮಾಡಿದ ಕರ್ಮಫಲವನ್ನು ಅವರೇ ಉಣ್ಣುತ್ತಾರೆ ಎಂಬ ಮಾತುಗಳು ಕಾರ್ಯಕ್ರಮದಲ್ಲಿ ಉದ್ಗರಿಸಿದವು. ಸೋಲಿನಿಂದಾಗಿ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸಬೇಕು, ಪಕ್ಷ ಸಂಘಟಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ ಉರಿಯುವವರು ಉರಿಯಲಿ ಬಿಡಿ, ಕುದಿಯುವವರು ಕುದಿಯಲು ಬಿಡಿ. ಉರಿಯುವವರು ಬೂದಿಯಾಗಿ ಹೋಗುತ್ತಾರೆ. ಕುದಿಯುವವರು ಆವಿಯಾಗಿ ಹೋಗುತ್ತಾರೆ. ನೀವು ಶಾಂತವಾಗಿ ಇದ್ದರೆ ಎಲ್ಲವನ್ನೂ ಕಾಲ ನಿರ್ಣಯಿಸಲಿದೆ ಎಂದು ಸಿದ್ದೇಶ್ವರ ಅವರಿಗೆ ಅಭಯ ತುಂಬಿದರು.
ಕೆಲವರು ಅಳಿಸಿದರೆ, ಮತ್ತೆ ಕೆಲವರು ಅಳಿಸುತ್ತಾರೆ, ಆಶೀರ್ವದಿಸುತ್ತಾರೆ. ಇತರರು ನಮಗೆ ಪಾಠವನ್ನೂ ಕಲಿಸುತ್ತಾರೆ. ಹೀಗಾಗಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ. ಆಗುವುದೆಲ್ಲ ಒಳಿತೆಂದು ಭಾವಿಸಿ. ಪಕ್ಷಕ್ಕೆ ದೋಹ ಮಾಡಿದವರಿಗೆ ಅದರ ಫಲ ಇದ್ದೇ ಇರುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ ಸಿದ್ದೇಶ್ವರ ಅವರದು ನೇರ ಮಾತು ಮತ್ತು ಹೃದಯದಲ್ಲಿ ಕಲ್ಮಷವಿಲ್ಲದ ವ್ಯಕ್ತಿತ್ವ. ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟಿಸಿದ್ದಾರೆ. ಅವರು ರಾಜಕಾರಣದಿಂದ ಶ್ರೀಮಂತರಾದವರಲ್ಲ. ಅದರಿಂದಲೇ ಹಣ ಕಳೆದುಕೊಂಡದ್ದೇ ಹೆಚ್ಚು ಎಂದರು.
ಲೋಕಸಭೆಯಲ್ಲಿ ಸೋಲುಂಡ ರಾಜ್ಯದ 9 ಕ್ಷೇತ್ರಗಳ ಪೈಕಿ ದಾವಣಗೆರೆ ಲೋಕಸಭಾ ಕ್ಷೇತ್ರವು ಅತಿ ಕಡಿಮೆ ಮತಗಳಿಂದ ಸೋತಿದೆ. 30ವರ್ಷದ ಹಿಂದೆ ವಾಜಪೇಯಿ ನೇತೃತ್ವದಲ್ಲಿ ಪಾಲಿಕೆ ಚುನಾವಣೆೆಯಲ್ಲಿ ಒಂದೂ ಸೀಟು ಬಿಜೆಪಿ ಗೆದ್ದಿರಲಿಲ್ಲ. ಒಂದು ಸಿನಿಮಾದಿಂದ ಸ್ಫೂರ್ತಿಗೊಂಡು ಅಡ್ವಾಣಿ ಅವರೊಂದಿಗೆ ಪಕ್ಷವನ್ನು ಸಂಘಟಿಸಿದರು. ಅಂತೆಯೇ ಮುಂದಿನ ಚುನಾವಣೆಗಳತ್ತ ಗಮನ ಹರಿಸಬೇಕು ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ ಇಂಜಿನಿಯರಿಂಗ್ ಕಾಲೇಜಿನ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸಿದ್ದೇಶ್ವರ ಅವರು ಅಂಗವಿಕಲರಿಗಾಗಿ ಸಿಆರ್‌ಸಿ ಕೇಂದ್ರ ತಂದರು. ಉದ್ಯಮಿಯಾಗಿ, ಸಂಸದರಾಗಿಯೂ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದರು. ಸಮಾಜಸೇವೆ ಮುಂದುವರಿಸಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ ಪಕ್ಷಕ್ಕೆ ಒಳ್ಳೆಯದನ್ನು ಮಾಡುವವರೇ ಕಾರ್ಯಕರ್ತರು. ಕೆಟ್ಟ ಕಾರ್ಯ ಮಾಡುವವರು ಆತ್ಮ ಇದ್ದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಸಿದ್ದೇಶ್ವರ ಅವರ ಜತೆಯಲ್ಲಿದ್ದೇವೆ. ಅವರು ಯಾವುದಕ್ಕೂ ಅಂಜಬೇಕಿಲ್ಲ ಎಂದು ಹೇಳಿದರು.
ಮುಖಂಡ ಯಶವಂತರಾವ್ ಜಾಧವ್ ಮಾತನಾಡಿ ಕಾಂಗ್ರೆಸ್, ಜೆಡಿಯುನಲ್ಲಿ ಗುರುತಿಸಿಕೊಂಡಿದ್ದ ಲಗಾನ್ ಟೀಂನ ಕೆಲವರನ್ನು ಈ ಹಿಂದೆ ಶಾಸಕರನ್ನಾಗಿ ಮಾಡಿದ್ದು ಸಿದ್ದೇಶ್ವರ ಅವರು ಎಂದು ಹೇಳಿದರು. ಕಿತ್ತೂರು ಚನ್ನಮ್ಮಳನ್ನು ನಮ್ಮವರೇ ಆದ ವೆಂಕಣ್ಣಪ್ಪ ಹಾಗೂ ಮಲ್ಲಪ್ಪಶೆಟ್ಟಿ ಸೋಲಿಸಿದರು. ಅದರಂತೆ ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿದವರು ಹೊರಗಿದ್ದಾರೆ. ಸಂಗೊಳ್ಳಿ ರಾಯಣ್ಣ ಸೇರಿ ಚನ್ನಮ್ಮನ ಭಂಟರಾಗಿದ್ದವರು ನಾವು ಇಲ್ಲಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ವೀರೇಶ್ ಹನಗವಾಡಿ, ದಾವಣಗೆರೆ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ ಅವರ ಸೋಲಿಗೆ ಕುತಂತ್ರಿಗಳೇ ಕಾರಣ. ನಮ್ಮೊಳಗಿನ ಮಲ್ಲಪ್ಪಶೆಟ್ಟಿಯಂಥವರೇ ಸೋಲಿಸಿದರು ಎಂದು ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಪ್ರೊ.ಎಂ. ಲಿಂಗಣ್ಣ, ಎಚ್.ಪಿ.ರಾಜೇಶ್, ಮುಖಂಡರಾದ ದೇವರಮನಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಆನಂದಪ್ಪ, ಜಿ.ಎಂ.ಲಿಂಗರಾಜು, ಜಿ.ಎಸ್. ಅನಿತ್‌ಕುಮಾರ್, ಅಣಬೇರು ಜೀವನಮೂರ್ತಿ, ಮುರುಗೇಶ್ ಆರಾಧ್ಯ, ಶಾಂತರಾಜ್, ನಂಜನಗೌಡ್ರು, ಬಿ.ಎಸ್. ಶ್ಯಾಮ್, ಯಶೋದಾ ಯಗ್ಗಪ್ಪ, ಎ.ವೈ. ಪ್ರಕಾಶ್, ಹನುಮಂತನಾಯ್ಕ, ಕೃಷ್ಣಪ್ಪ, ಬಿ.ಎಸ್. ಜಗದೀಶ್ ಇತರರಿದ್ದರು.
ಕಾಂಗ್ರೆಸ್ ಕಸಗುಡಿಸಲು ಒಂದಾಗಿ
ಹಿಂದುತ್ವ ಮತ್ತು ರಾಷ್ಟ್ರ ಮೊದಲು ಎಂಬುದು ಬಿಜೆಪಿ ಸಿದ್ಧಾಂತ. ಚುನಾವಣೆಯಲ್ಲಿ ಸೋಲಾಗಿದೆ. ಆದರೆ ಸಿದ್ಧಾಂತಕ್ಕೆ ಎಂದೂ ಸೋಲಿಲ್ಲ. ಭಾರತ ವಿಶ್ವಗುರುವಾಗುವ ಗುರಿ ಸಾಧಿಸಲು ನಾವು ಒಗ್ಗಟ್ಟಾಗುವ ಅಗತ್ಯವಿದೆ. ಪೊರಕೆ ದಂಡು ಕಟ್ಟಿದಾಗ ಮಾತ್ರ ಕಸ ಗುಡಿಸಬಹುದು. ಕಟ್ಟು ಬಿಚ್ಚಿದರೆ ಅದೇ ಕಸವಾದೀತು. ಹಾಗಾಗಿ ನಾವು ಒಂದಾಗಬೇಕು. ಹಾಗಾದಾಗ ಕಾಂಗ್ರೆಸ್‌ನ ಕಸಗುಡಿಸಬಹುದು.
ಸಿ.ಟಿ.ರವಿ
ಮಾಜಿ ಸಚಿವ
ಜಿಎಂಎಸ್‌ಗೆ ರಾಜ್ಯಸಭಾ ಸ್ಥಾನ ಕಲ್ಪಿಸಿ
ಸಿದ್ದೇಶ್ವರ ಅವರು ಮುಂಬರುವ ಗ್ರಾಪಂ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ನೇತೃತ್ವ ವಹಿಸಬೇಕು. ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಸಂಘಟನೆ ಆಗಬೇಕಿದ್ದರೆ ಸಿದ್ದೇಶ್ವರ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನಮಾನ ಕಲ್ಪಿಸಲು ವರಿಷ್ಠರು ಗಮನ ಹರಿಸಬೇಕೆಂದು ಶಾಸಕ ಬಿ.ಪಿಹರೀಶ್ ಮನವಿ ಮಾಡಿದರು.
----