ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಿ       ಜಿಲ್ಲಾಧಿಕಾರಿಗೆ ಪಾಲಿಕೆ ವಿಪಕ್ಷ ಸದಸ್ಯರ ಮನವಿ

1000256087.jpg
Published on

ದಾವಣಗೆರೆ: ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಹೊಸ ನಿಲ್ದಾಣಗಳಿಗೆ ಸ್ಥಳಾಂತರಿಸಲು ನಗರಪಾಲಿಕೆಗೆ ನಿರ್ದೇಶನ ನೀಡಬೇಕೆಂದು ನಗರಪಾಲಿಕೆ ವಿಪಕ್ಷನಾಯಕ ಪ್ರಸನ್ನಕುಮಾರ್ ಹಾಗೂ ಉಪಮೇಯರ್ ಯಶೋದಾ ಯೋಗೇಶ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಡಾ.ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.
ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ನೂತನ ಕಾಮಗಾರಿಗಳು ನಿರ್ಮಾಣಗೊಂಡಿದ್ದರ ಹೈಸ್ಕೂಲ್ ಮೈದಾನದಲ್ಲಿನ ತಾತ್ಕಾಲಿಕ ನಿಲ್ದಾಣಗಳು ತೆರವಾಗಿಲ್ಲ. ಕೂಡಲೆ ಹೊಸ ಕಟ್ಟಡಗಳಿಗೆ ಸ್ಥಳಾಂತರಿಸಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಬೇಕೆಂದು ಮನವಿ ಮಾಡಿದರು.
ಜಲಸಿರಿ ಕಾಮಗಾರಿ ಪೂರ್ಣಗೊಂಡು, ಸಮರ್ಪಕ ನೀರು ವಿತರಣೆ ಆಗುವವರೆಗೂ, ಜಲಸಿರಿ ಯೋಜನೆಯಡಿ ರಸೀದಿ ವಿತರಿಸಲಾಗುತ್ತಿದೆ. ಇದನ್ನು ಕೈಬಿಡಬೇಕು ಎಂದು ಎರಡು ಬಾರಿ ಆಯುಕ್ತರು, ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೆಲಸವಾಗಿಲ್ಲ. ಎರಡನೆಯ ತಿಂಗಳೂ ಕೂಡ, ಬಿಲ್ ನೀಡಲಾಗುತ್ತಿದ್ದು, ಇದನ್ನು ತಡೆಹಿಡಿಯಬೇಕು ಎಂದು ಕೋರಲಾಯಿತು.
ಕುಡಿವ ನೀರಿನ ವಿತರಣೆಯಲ್ಲೂ ವಿಳಂಬವಾಗುತ್ತಿದೆ. ಕೆಲವೆಡೆ 8-10 ದಿನಗಳಿಗೊಮ್ಮೆ ನೀರು ವಿತರಣೆಯಾಗುತ್ತಿದ್ದು, ಮಳೆಗಾಲದಲ್ಲೂ, ನೀರನ್ನು ವಿತರಿಸಲು ಪಾಲಿಕೆ ವಿಫಲವಾಗಿದೆ. ಸಾರ್ವಜನಿಕರಿಗೆ 3 ದಿನಕ್ಕೊಮ್ಮೆ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಪಾಲಿಕೆ ಸೂಚಿಸಬೇಕು ಎಂದು ನಿಯೋಗ ಮನವಿ ಮಾಡಿತು.
ನಗರದ ಇನ್ನೂ ಅನೇಕ ಸಮಸ್ಯೆಗಳು ಮತ್ತು ಅಭಿವೃದ್ಧಿ ದೃಷ್ಟಿಯಿಂದ ಹಲವು ವಿಚಾರಗನ್ನು ಡಿಸಿ ಗಮನಕ್ಕೆ ತರಲಾಯಿತು. ಮುಂದಿನ ದಿನಗಳಲ್ಲಿ ಈ ಎಲ್ಲಾ ವಿಭಾಗವಾರು ಮತ್ತು ಪಾಲಿಕೆಯ ಎಲ್ಲಾ, ಅನುಷ್ಠಾನ ಹಂತದಲ್ಲಿ ಇರುವ ಮತ್ತು ಅನುಷ್ಠಾನ ಗೊಳಿಸಬೇಕಾಗಿರುವ ಕಾಮಗಾರಿಗಳು, ಯೋಜನೆಗಳ ಕುರಿತಂತೆ ವಿಭಾಗವಾರು ಸಭೆಗಳನ್ನು ನಡೆಸಲಾಗುವುದು. ನಗರದ ಅಭಿವೃದ್ಧಿಗೆ ನಾನು ಸಿದ್ದನಿದ್ದೇನೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್, ಗಾಯತ್ರಿಬಾಯಿ ಖಂಡೋಜಿ ರಾವ್, ಗೌರಮ್ಮ ಗಿರೀಶ್, ಕೆ.ಎಂ. ವೀರೇಶ್,  ಮುಖಂಡರಾದ ಸುರೇಶ್ ಗಂಡುಗಲಿ, ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net