

ದಾವಣಗೆರೆ: ಯುಬಿಡಿಟಿ ಕಾಲೇಜಿನ ಶೇ.50ರಷ್ಟು ಸೀಟುಗಳನ್ನು ಉನ್ನತ ಸರ್ಕಾರಿ ಶುಲ್ಕದ ಹೆಸರಲ್ಲಿ ಮಾರಾಟ ಮಾಡುವುದನ್ನು ಖಂಡಿಸಿ ಎಐಡಿಎಸ್‌ಒ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜು ಆವರಣದಿಂದ ಮೆರವಣಿಗೆ ಹೊರಟು ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸೀಟು ವ್ಯಾಪಾರೀಕರಣ ಸಲ್ಲದು. ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳುವ ಸರ್ಕಾರದ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಮಾತನಾಡಿ, ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಸರ್ಕಾರ ಬಡವರಿಗೆ ದ್ರೋಹವೆಸಗಿದೆ. ನಗರದ ಯುಬಿಡಿಟಿ ಕಾಲೇಜಿನ 504 ಸೀಟುಗಳ ಪೈಕಿ ಶೇ.50ರಷ್ಟು ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರಲಾಗುತ್ತಿದೆ ಎಂದು ದೂರಿದರು.
ಕಾಲೇಜಿನ ಮೂಲ ಶುಲ್ಕ 42 ಸಾವಿರ ರೂಪಾಯಿಯೇ ದೊಡ್ಡ ಹೊರೆಯಾಗಿರುವಾಗ 97 ಸಾವಿರ ರೂ. ನಿಗದಿಗೊಳಿಸಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ ಎಂದು ಸರ್ಕಾರದ ನೀತಿ ಖಂಡಿಸಿದರು.
ವಿದ್ಯಾರ್ಥಿಗಳ ಹೋರಾಟದ ಫಲವಾಗಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದಿದೆ. ಆದರೆ, ಅದೇ ಎನ್‌ಇಪಿ-2020ರ ಅಂಶವಾದ ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ, ಸ್ವಹಣಕಾಸು ಸಂಸ್ಥೆಗಳನ್ನಾಗಿ ಮಾಡುವ ಕರಾಳ ನೀತಿ ಜಾರಿಗೊಳಿಸುತ್ತಿದೆ ಎಂದು ಹರಿಹಾಯ್ದರು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಸರ್ಕಾರ ಹೆಚ್ಚಿನ ಶುಲ್ಕದ ಕೋಟಾ ಕೂಡಲೇ ಹಿಂಪಡೆಯಬೇಕು. ಹೆಚ್ಚಿಗೆ ಪಡೆದ ಮೊತ್ತವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು. ಕಾಲೇಜಿನ ಆರ್ಥಿಕ ಅವಶ್ಯಕತೆ ಪೂರೈಸಲು ಹೆಚ್ಚಿನ ಅನುದಾನ ಒದಗಿಸಬೇಕು. ಯುಬಿಡಿಟಿಯ ಸಂಪೂರ್ಣ ಆರ್ಥಿಕ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಯುಬಿಡಿಟಿ ಕಾಲೇಜನ್ನು ಖಾಸಗಿ ಕಾಲೇಜನ್ನಾಗಿಸಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
‘ರಾಜ್ಯದ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ವ್ಯಾಪಾರಿ ಸಂಸ್ಥೆಯನ್ನಾಗಿ ಮಾಡಬೇಡಿ’ ‘ಶಿಕ್ಷಣ ವ್ಯಾಪಾರೀಕರಣ ಬೇಡ ’ ಮತ್ತಿತರ ನಾಮಫಲಕಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ಸದಸ್ಯರಾದ ಅಭಿಷೇಕ್, ಯೋಗೇಶ, ಶ್ರವಣ್, ರಕ್ಷಿತಾ, ದೀಪಿಕಾ, ಚಂದನಾ, ನರೇಶ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
---