

ದಾವಣಗೆರೆ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಅವ್ಯವಸ್ಥೆಗೆ ಸರಿದಿದೆ ಎಂದು ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ ಟೀಕಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಅವರು ಸೋಮವಾರ ನಗರದ ಕುಮುದ ಕಾಲೇಜು ಹಾಗೂ ಅಮೃತ ವಿದ್ಯಾಲಯ ಶಾಲೆಗೆ ಸೋಮವಾರ ಭೇಟಿ ನೀಡಿ ಅಲ್ಲಿನ ಶಿಕ್ಷಕರಲ್ಲಿ ಮತ ಯಾಚಿಸಿ ಮಾತನಾಡಿದರು.
ಸರ್ಕಾರದ ಕೆಲ ನಿರ್ಧಾರಗಳಿಂದಾಗಿ ಶಾಲಾ ಮಕ್ಕಳ ಭವಿಷ್ಯ ಮಂಕಾಗಿದೆ. ಶಿಕ್ಷಣ ಸಚಿವರಲ್ಲಿ ಇಲಾಖೆಯ ಹಿಡಿತವಿಲ್ಲ. ಅಧಿಕಾರಿಗಳ ಹಿಟ್ಲರ್ ದರ್ಬಾರ್‌ನಿಂದಾಗಿ ಇಲಾಖೆಯಲ್ಲಿ ಪ್ರಜಾಪ್ರಭುತ್ವ ಇಲ್ಲವಾಗಿದೆ ಎಂದು ದೂರಿದರು.
ಖಾಸಗಿ ಅನುದಾನಿತ ಶಾಲೆಗಳ ಕಾರ್ಯನಿರತ ಶಿಕ್ಷಕರಿಗೆ ಯಾವುದೇ ರೀತಿಯ ತೊಂದರೆ ಆದಾಗೆಲ್ಲ ಸಾಕಷ್ಟು ಬಾರಿ ಹೋರಾಟ ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ನಿಮ್ಮ ಪರವಾಗಿ ನಿಲ್ಲುವೆ. ನಾನು ಇರುವವರೆಗೂ ನಿಮಗೆ ಸಂಬಳದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಖಾಸಗಿ ಅನುದಾನಿತ ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಅವಧಿಯಲ್ಲಿ ಸುಮಾರು 30 ಕೋಟಿ ರೂ. ಅನುದಾನ ನೀಡಿದ್ದೇನೆ. ಸುಮಾರು 600 ವಾಟರ್ ಫಿಲ್ಟರ್ ಕುಡಿವ ನೀರು ವ್ಯವಸ್ಥೆ ಮಾಡಿದ್ದೇನೆ.ಜಿಲ್ಲೆಯ ಖಾಸಗಿ ಅನುದಾನಿತ ಶಾಲೆಗಳಿಗೆ ಅನುದಾನ ಕಲ್ಪಿಸಿದ್ದೇನೆ ಎಂದು ತಿಳಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಇತಿಹಾಸ ಇಲ್ಲ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಪ್ರೊ.ಎನ್. ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಎನ್. ಶಿವಕುಮಾರ್, ಸಾಂಬಶಿವಯ್ಯ ಇದ್ದರು.