ದಾವಣಗೆರೆಯಲ್ಲಿ ಸಂಭ್ರಮದ ಈದ್ ಮಿಲಾದ್  ಮೆರವಣಿಗೆಗೆ ಶಾಸಕ ಎಸ್ಸೆಸ್ ಚಾಲನೆ

pixlr_20240917004115168.jpg
Published on

ದಾವಣಗೆರೆ: ನಗರದಲ್ಲಿ ಎಲ್ಲೆಡೆ ಸೋಮವಾರ, ಈದ್ ಮಿಲಾದ್ ಹಬ್ಬದ ಸಡಗರ. ತಂಡೋಪತಂಡವಾಗಿ ಬಂದ ಮುಸ್ಲಿಮರು ಮೆರವಣಿಗೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದರು.
ಮದೀನಾ ವೃತ್ತದ ಬಳಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮಹಾತ್ಮ ಗಾಂಧಿ ವೃತ್ತದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮುಸ್ಲಿಂ ಮುಖಂಡರಿಗೆ ಶುಭ ಕೋರಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಮದೀನಾ ಅರಬ್ಬೀ ಮದರಸಾ ಆವರಣದಿಂದ ಹೊರಟ ಮೆರವಣಿಗೆ, ಚಾಮರಾಜಪೇಟೆ, ಮಂಡಿಪೇಟೆ, ಬಾರ್‌ಲೈನ್ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಪಿ.ಬಿ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತ ತಲುಪಿತು.
ನಿಟುವಳ್ಳಿ ಹಾಗೂ ವಿನೋಬನಗರ ಕಡೆಗಳಿಂದಲೂ ಪ್ರತ್ಯೇಕವಾಗಿ ಕಾಲ್ನಡಿಗೆಯಲ್ಲಿ ಬಂದ ಜನರು ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಯಾಗಿ ಅಲ್ಲಿಂದ ಶಾಂತಿ ಥಿಯೇಟರ್ ರಸ್ತೆ ಮೂಲಕ ಮಿಲಾದ್ ಮೈದಾನದತ್ತ ಹೆಜ್ಜೆ ಹಾಕಿದರು. ಅಲ್ಲಿ ಧರ್ಮ ಗುರುಗಳಿಂದ ಹಬ್ಬದ ವಿಶೇಷ ಸಂದೇಶ ನೀಡಲಾಯಿತು.
ಮದೀನಾ ವೃತ್ತದಿಂದ ದಾವಣಗೆರೆ ಹಳೇ ಭಾಗದ ಬಹುತೇಕ ಕಡೆ ರಸ್ತೆಗಳುದ್ದಕ್ಕೂ ವಿಶೇಷ ಪರದೆ, ವಿದ್ಯುದಲಂಕಾರ ಮಾಡಲಾಗಿತ್ತು. ನಗರದೆಲ್ಲೆಡೆ ಬಾವುಟಗಳು ರಾರಾಜಿಸಿದರೆ, ಹಬ್ಬಕ್ಕೆ ಶುಭಾಶಯ ಕೋರಿದ ಫ್ಲ್ಲೆಕ್ಸ್‌ಗಳು ಕಂಡುಬಂದವು. ಮುಸ್ಲಿಂ ಮಹಿಳೆಯರು ಮೆರವಣಿಗೆ ನೋಡಲು ವೃತ್ತಗಳಲ್ಲಿ ಸೇರಿದ್ದರು.
ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ದೊಡ್ಡ ಕ್ರೇನ್‌ಗೆ ಅಳವಡಿಸಿದ್ದ ಸುಮಾರು 20 ಮೀಟರ್ ಉದ್ದದ ಹಸಿರು ಬಾವುಟ ಯುವಕರಿಗೆ ಸೆಲ್ಫೀ ಕೇಂದ್ರವಾಗಿ ಬದಲಾಗಿತ್ತು. ಸಮೀಪದಲ್ಲಿದ್ದ ಜೆಸಿಬಿ ಹತ್ತಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಚಿಣ್ಣರು ಆಕರ್ಷಕ ಬಟ್ಟೆ ಧರಿಸಿದ್ದರು. ಕೆಲ ಮಕ್ಕಳು ಕವ್ವಾಲಿ ಹಾಡುಗಾರರ ವೇಷಧಾರಿಗಳಾಗಿದ್ದರು.
ಅಲಂಕೃತ ವಾಹನಗಳಲ್ಲಿ ಮದೀನಾ ಗುಂಬಜ್ ಮಾದರಿಗಳು, ಡೆಕ್‌ಗಳಲ್ಲಿ ಹಾಡುಗಳು ಮೊಳಗಿದವು. ನಿಟುವಳ್ಳಿ ಕಡೆಯಿಂದ ಬಂದ ಯುವಕರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಟಿಪ್ಪು ಸುಲ್ತಾನ್, ಹುಲಿ, ಖಡ್ಗ ಹಾಗೂ ಧರ್ಮ ಸಂದೇಶವುಳ್ಳ ಧ್ವಜಗಳು ಕಂಡುಬಂದವು. ಕೆಲವರು ದೊಡ್ಡ ಬಾವುಟದ ಕೋಲನ್ನು ತಿರುಗಿಸಿದರು.
ಹಬ್ಬದ ಅಂಗವಾಗಿ ಕೆಲ ದಾನಿಗಳು ಮೆರವಣಿಗೆಯಲ್ಲಿ ಬರುವವರಿಗೆ ಮೋಸಂಬಿ ಹಣ್ಣು, ನೀರಿನ ಬಾಟಲು, ತಿಂಡಿ, ಷರಬತ್ತು ಇತ್ಯಾದಿ ನೀಡಿದರು. ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಿದ್ದ ನಗರದ ಎಲ್ಲ ಪ್ರಾರ್ಥನಾ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಸಂದೇಶ ಸಾರಲಾಯಿತು. ವಿವಿಧ ಸೇವಾ ಕಾರ್ಯ ನಡೆದವು.
ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ತಂಜಿಂ ಅಧ್ಯಕ್ಷ ದಾದೂಶೇರ್, ಈದ್‌ಮಿಲಾದ್ ಕಮಿಟಿ ಅಧ್ಯಕ್ಷ ಎ.ಬಿ. ಹಬೀಬ್ ಉಲ್ಲಾ ಸಾಬ್, ಅಬ್ದುಲ್ ಜಬ್ಬಾರ್, ಸೈಯದ್ ಸೈಫುಲ್ಲಾ ಹಾಗೂ ಈದ್‌ಮಿಲಾದ್ ಕಮಿಟಿ ಪದಾಧಿಕಾರಿಗಳು ಭಾಗಿಯಾಗಿದ್ದರು.
4 ಕೆಎಸ್‌ಆರ್‌ಪಿ, 4 ಡಿಎಆರ್, 2 ಕ್ಷಿಪ್ರ ಕಾರ್ಯಪಡೆ, ದುರ್ಗಾ ಪಡೆ ಒಳಗೊಂಡಂತೆ 1 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿ-ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದರು.
ಪ್ಯಾಲೆಸ್ಟೈನ್ ಪರ ಸ್ಟಿಕ್ಕರ್?

ಮೆರವಣಿಗೆ ವೇಳೆ ಕೆಲ ಯುವಕರು ಧರಿಸಿದ್ದ ಷರ್ಟ್ ಮೇಲೆ ಅಂಟಿಸಿಕೊಂಡಿದ್ದ ಸ್ಟಿಕ್ಕರ್‌ಗಳು, ಪ್ಯಾಲೆಸ್ಟೈನ್ ಪರವಾಗಿ ಇತ್ತೆನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ಹರಿದಾಡುತ್ತಿವೆ.
ಈ ಬಗ್ಗೆ ನಮಗೂ ಮಾಹಿತಿ ದೊರೆತಿದೆ. ಈ ವಿಚಾರವಾಗಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಪತ್ರಿಕೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net