ಎಸ್‌ಎಫ್‌ಐ ಶೈಕ್ಷಣಿಕ ಜಾಥಾ ಆರಂಭ

1001244078.jpg
Published on

ದಾವಣಗೆರೆ: ದೇಶಾದ್ಯಂತ ಸಾಕಷ್ಟು ಶೈಕ್ಷಣಿಕ ಸಮಸ್ಯೆಗಳಿರುವಾಗ ಕೇಂದ್ರ ಸರ್ಕಾರವು ಪಠ್ಯದಲ್ಲಿ ಆರ್‌ಎಸ್‌ಎಸ್ ಸಿದ್ಧಾಂತವನ್ನು ಹೇರುತ್ತಿದೆ. ಕೋಮುವಾದದ ಮೂಲಕ ಒಡಕು ಮೂಡಿಸುವ ಪ್ರಯತ್ನ ನಡೆದಿದೆ ಎಂದು ಎಸ್‌ಎಫ್‌ಐನ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಸಾಜಿ ಹೇಳಿದರು.

ಸಾರ್ವಜನಿಕ ಶಿಕ್ಷಣದ ಉಳಿವು, ಹಾಸ್ಟೆಲ್ ಬಲವರ್ಧನೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್‌ನ ರಾಜ್ಯ ಸಮಿತಿ ವತಿಯಿಂದ ದಾವಣಗೆರೆಯಿಂದ ಆರಂಭವಾದ ರಾಜ್ಯವ್ಯಾಪಿ ಶೈಕ್ಷಣಿಕ ಜಾಥಾ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಪಠ್ಯದಲ್ಲಿ, ಬ್ರಿಟಿಷರ ಕ್ಷಮೆ ಕೇಳಿದ್ದ ಸಾವರ್ಕರ್ ಕುರಿತ ಪರಿಚಯ ನೀಡಲಾಗಿದೆ. ಕೇಂದ್ರ ಸಚಿವರು ವಿಜ್ಞಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಅನೇಕ ಸರ್ಕಾರಿ ಶಾಲೆಗಳು ಬಾಗಿಲು ಹಾಕಿವೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ಮಕ್ಕಳಿಗೆ ಹೈಟೆಕ್ ತರಗತಿ ಕೊಠಡಿಗಳಿಲ್ಲ. ಸಕಾಲಕ್ಕೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಪ್ರತಿ ವಿದ್ಯಾರ್ಥಿಗೂ ಉಚಿತ ಶಿಕ್ಷಣ ಕಲ್ಪಿಸಬೇಕು. ಇದು ಸರ್ಕಾರಗಳ ಆದ್ಯ ಕರ್ತವ್ಯ. ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ ಮೂಲ ಹಕ್ಕಾಗಬೇಕು ಎಂದು ಆಶಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು ಮಾತನಾಡಿ ರಾಜ್ಯದಲ್ಲಿ ಶಿಕ್ಷಣ ಖಾಸಗೀಕರಣ ಆಗುತ್ತಿದೆ. 70ರಷ್ಟು ಖಾಸಗಿ ಸಂಸ್ಥೆಗಳಿವೆ. ರಾಜ್ಯದ ಹಾಸ್ಟೆಲ್‌ಗಳಲ್ಲಿ ನಿಯಮಿತ ಮತ್ತು ಪೌಷ್ಟಿಕ ಊಟ ನೀಡುತ್ತಿಲ್ಲ. ಅಡುಗೆ ಸಿಬ್ಬಂದಿ ಕೊರತೆ ಇದೆ. ಅಲ್ಲಿನ ವಿದ್ಯಾರ್ಥಿಗಳು ಕೈದಿಗಳಿಗಿಂತಲೂ ಹೀನ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಬ್ಲಿಕಲ್ ಮಾತನಾಡಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು. ಹಾಸ್ಟೆಲ್‌ಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಗಣೇಶ ರಾಥೋಡ್, ರಾಜ್ಯ ಸಮಿತಿ ಸದಸ್ಯರಾದ ಗ್ಯಾನೇಶ್ ಕಡಗದ, ಚಂದ್ರ ರಾಥೋಡ್, ಅನಂತರಾಜ್, ಅಭಿ ಮೈಸೂರು, ಕೆಪಿಆರ್‌ಎಸ್ ಜಿಲ್ಲಾ ಮುಖಂಡ ಇ. ಶ್ರೀನಿವಾಸ, ಆಟೋ ಚಾಳಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ವಿಜಯ್ ಇತರರಿದ್ದರು.

ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಜಾಥಾಗೆ ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net