ಪ್ರೀತಿ ಗೋಜು ಬಿಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ

1000562798.jpg
Published on

ದಾವಣಗೆರೆ: ವಿದ್ಯಾರ್ಥಿ ಜೀವನ ಒಂದು ಸುವರ್ಣ ಅವಕಾಶ. ಕೆಪಿಎಸ್‌ಸಿ, ಯುಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ. ವ್ಯಾಸಂಗದ ವೇಳೆ ಪ್ರೀತಿ-ಪ್ರೇಮದ ಗೋಜು ಬೇಡ ಎಂದು ಎಸ್ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.
ಇಲ್ಲಿನ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪಾಲಕರು ಶಿಕ್ಷಣ ನೀಡುತ್ತಿದ್ದಾರೆ. ಇದನ್ನು ಸದುಪಯೋಗ ಮಾಡಿಕೊಳ್ಳಿ. ಅನ್ಯ ದಾರಿ ತುಳಿಯಬೇಡಿ. ಪ್ರೀತಿಯೇ ಜೀವನ ಅಲ್ಲ. ಅದು ಒಂದು ಭಾಗ ಮಾತ್ರ. ಪ್ರೀತಿಯ ನಶೆಯಲ್ಲಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ. ಪಾಲಕರು ಹಾಗೂ ಪತಿಯ ಮೇಲೆ ಅವಲಂಬನೆ ಆಗುವುದು ಬೇಡ. ಸಾಮಾಜಿಕ  ಜಾಲತಾಣ ಜವಾಬ್ದಾರಿಯುತವಾಗಿ ನಿರ್ವಹಿಸಿ. ಮಾರ್ಪಿಂಗ್ ಮಾಡುವ ಅಪಾಯ ಇದೆ. ಖಾಸಗಿ ಬದುಕಿನ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ತಿಂಗಳಿಗೊಂದು ಪುಸ್ತಕ ಓದುವ ಸಂಕಲ್ಪ ಮಾಡಿ. ಅನ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪುಸ್ತಕ ಅಧ್ಯಯನ ಮಾಡಿ. ಆಡಿಯೊ ಬುಕ್ ಕೇಳುವ ಅಭ್ಯಾಸವನ್ನಾದರೂ ಬೆಳೆಸಿಕೊಳ್ಳಿ. ಹಿಂದಿನ ಕಾಲದ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಇಂದಿನ ಹೆಣ್ಣುಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಇದೆ. ಇದರ ದುರ್ಬಳಕೆ ಆಗದಿರಲಿ ಎಂದರು.
ಸ್ತ್ರೀಯರು ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಿದೆ. ಯಾವುದೇ ಪರಿಸ್ಥಿತಿ ನಿಭಾಯಿಸುವ ನಿರ್ಧಾರ ಮಾಡಿಕೊಳ್ಳಿ. ಆರ್ಥಿಕ ಸ್ವಾವಲಂಬನೆಗೆ ಉದ್ಯೋಗ ಪಡೆಯುವುದು ತೀರಾ ಅಗತ್ಯವಿದೆ ಎಂದು ಹೇಳಿದರು.
ಜೀವನದಲ್ಲಿ ಗುರಿ ಹಾಗೂ ನಿರ್ಣಯವಿರಲಿ. ಇದಕ್ಕೆ ಪೂರಕವಾಗಿ ಬದ್ಧತೆಯೂ ಇರಲಿ. ಕಡು ಬಡತನದಿಂದ ಬೆಳೆದ ಅನೇಕರು ಉನ್ನತ ಹುದ್ದೆಗೇರಿದ್ದಾರೆ. ಹೀಗಾಗಿ ಸೌಲಭ್ಯಗಳಿಲ್ಲ ಎಂಬ ಕೊರಗದೆ ನಿರ್ಧಾರ ಅಚಲವಾಗಿರಿಸಿ ಎಂದರು.
ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್, ಹೂಡಿಕೆ, ವಿಮೆ ಹೆಸರಿನಲ್ಲಿ ಹಣ ವಂಚನೆ ಹೆಚ್ಚುತ್ತಿವೆ, ನಮ್ಮ ಡಿಜಿಟಲ್ ಹೆಜ್ಜೆ ಗುರುತು ದುಷ್ಕರ್ಮಿಗಳಿಗೆ ಸಿಗುತ್ತದೆ. ನಿಮಗೆ ಸಿಕ್ಕ ಅಮೂಲ್ಯ ಸಮಯವನ್ನು ಬೌದ್ದಿಕ ಬೆಳವಣಿಗೆ ಕಡೆಗೆ ಬಳಸಿ. ನಾಯಕತ್ವದ ಗುಣ ಬೆಳೆಸಿಕೊಳ್ಳಿ ಎಂದು ಹೇಳಿದರು.
ವಿನಾಯಕ ಎಜುಕೇಷನ್ ಟ್ರಸ್ಟ್‌ನ ಉಪಾಧ್ಯಕ್ಷ ಬಿ.ಸಿ.ಉಮಾಪತಿ, ಕಾರ್ಯದರ್ಶಿ ಎನ್.ಎ. ಮುರುಗೇಶ್, ಅಥಣಿ ಸಂಯುಕ್ತ ಪಪೂ ಕಾಲೇಜು ಅಧ್ಯಕ್ಷ ಅಥಣಿ ಪ್ರಶಾಂತ್, ಎಸ್‌ಬಿಸಿ ಕಾಲೇಜಿನ ಪ್ರಾಚಾರ್ಯ  ಡಾ.ಕೆ.ಷಣ್ಮುಖ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಭಾಗ್ಯಶ್ರೀ ಹುಬ್ಳೀಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net