ಕಲಿಕಾ ಗುಣಮಟ್ಟಕ್ಕೆ ಶಿಕ್ಷಣ ಇಲಾಖೆ ಕಸರತ್ತು   ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕಾರ್ಯತಂತ್ರ

1000258856.jpg
Published on

ದಾವಣಗೆರೆ: ಪ್ರೌಢ ಶಿಕ್ಷಣದ ಕಲಿಕಾ ಗುಣಮಟ್ಟ ಸುಧಾರಣೆ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಅಭಿವೃದ್ಧಿಗೆ ಶೈಕ್ಷಣಿಕ ವರ್ಷಾರಂಭದಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಕಾರ್ಯೋನ್ಮುಖವಾಗಿದೆ. ಸೃಜನಶೀಲ, ಆವಿಷ್ಕೃತ ಚಟುವಟಿಕೆಗೆ ಜಿಲ್ಲೆಯಲ್ಲಿ ಆದ್ಯತೆ ನೀಡಲಾಗಿದೆ.
ಇಲಾಖೆ ಸುತ್ತೋಲೆಯನ್ವಯ ಶಾಲಾವಾರು ಸಾಧನೆ-ಕೊರತೆ ಆಧರಿಸಿ ಗುಣಮಟ್ಟದ ಕಲಿಕೆಯಲ್ಲಿ ನಿರ್ದಿಷ್ಟ ಕಾರ್ಯತಂತ್ರಗಳ ಕ್ರಿಯಾಯೋಜನೆಗೆ ಜೀವ ತುಂಬುವ ಪ್ರಯತ್ನ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಸಾಲಿನ ಶೈಕ್ಷಣಿಕ ಪ್ರಗತಿ ವಿಶ್ಲೇಷಿಸಿ ಗುರಿ ಸಾಧನೆಗಾಗಿ ತರಗತಿ/ವಿಷಯವಾರು ಶೈಕ್ಷಣಿಕ ಯೋಜನೆ ತಯಾರಿಸುವುದು. ವಿಷಯವಾರು ಬೋಧನೆಗೆ ಶಿಕ್ಷಕರ ನಿಯೋಜನೆ, ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗಾಗಿ ಶಿಕ್ಷಕರಿಗೆ ಜವಾಬ್ದಾರಿ ನೀಡುವುದು. ವಾರ್ಷಿಕ ಪಾಠ ಹಂಚಿಕೆಯಂತೆ ಬೋಧನಾ ಕಲಿಕಾ ಪ್ರಕ್ರಿಯೆ, ಕಲಿಕೆಯಲ್ಲಿನ ಹಿನ್ನಡೆಗೊಳಗಾದ ಶಾಲೆಗಳನ್ನು ಉಸ್ತುವಾರಿ ಅಧಿಕಾರಿಗಳು ದತ್ತು ಪಡೆದು ಅನುಪಾಲನೆ ಮಾಡಲು ಸೂಚಿಸಲಾಗಿದೆ.
ಸರಾಸರಿಗಿಂತ ಹೆಚ್ಚು ಮತ್ತು ಕಡಿಮೆ ಕಲಿಕಾ ಸಾಮರ್ಥ್ಯದ ವಿದ್ಯಾರ್ಥಿಳುಳ್ಳ ಆರು ಗುಂಪುಗಳನ್ನು ರಚಿಸಿ , ಅವನ್ನು ವಿಷಯ ಶಿಕ್ಷಕರು ತಲಾ ಗುಂಪನ್ನು ದತ್ತು ಪಡೆದು ವರ್ಷಪೂರ್ತಿ ಸಿ.ಸಿ.ಇ ಚಟುವಟಿಕೆ ನಡೆಸಬೇಕಿದೆ. ಜುಲೈ, ಜನವರಿಯಲ್ಲಿ ವಿದ್ಯಾರ್ಥಿಗಳನ್ನು ಪಾಳಿಯನ್ವಯ ಅಭ್ಯಾಸ ಸಾಮಗ್ರಿಗಳನ್ನು ಪರಿಶೀಲಿಸಿ, ಮನೆಗಳಲ್ಲಿ ಕಲಿಕಾ ವಾತಾವರಣ ಸಮಾಲೋಚಿಸುವುದು. ವರ್ಷಕ್ಕೆ ನಾಲ್ಕು ಬಾರಿ ಪಾಲಕರ ಸಭೆ ಕರೆದು ಅವರ ಮಕ್ಕಳ ಕಲಿಕಾ ಪ್ರಗತಿ ಮರುಮನನ ಮಾಡಿಕೊಡುವುದು.
ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ಶಾಲೆಗಳಿಗೆ ಸಂದರ್ಶನದೊಂದಿಗೆ ಅಲ್ಲಿನ ಕಾರ್ಯತಂತ್ರಗಳ ಅನುಷ್ಠಾನ, ಹತ್ತಿರದ ಶಾಲೆಯ ಅನುಭವಿ ಸಂಪನ್ಮೂಲ ಶಿಕ್ಷಕರ ಜತೆ ವಿಚಾರ ವಿನಿಮಯ, ಎಸ್ಸೆಸ್ಸೆಲ್ಸಿಯಲ್ಲಿ ವಿಷಯವಾರು ತಲಾ 8 ಪ್ರಾಜೆಕ್ಟ್‌ಗಳನ್ನು ನೀಡಿ ಆಂತರಿಕ ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಅಂಕ ದಾಖಲಿಸಬೇಕು.
ರಸಪ್ರಶ್ನೆ, ಅನಿರೀಕ್ಷಿತ ಕಿರುಪರೀಕ್ಷೆ, ಪುಸ್ತಕ ನೋಡಿ ಗುರುತಿಸಿ ಉತ್ತರಿಸಲು ತಿಳಿಸುವುದು. ವಸ್ತು ಪ್ರದರ್ಶನ, ಪಠ್ಯಾಧಾರಿತ ಸ್ಪರ್ಧೆ ಚಟುವಟಿಕೆಳು ಪ್ರಾತ್ಯಕ್ಷಿಕೆ, ಗೊಂದಲದ ವಿಷಯ ಕುರಿತು ಸಂವಾದ ನಡೆಸಲು ಸೂಚಿಸಲಾಗಿದೆ. ಶಾಲೆಯಲ್ಲಿ ಇ-ಕಲಿಕಾ ಕೇಂದ್ರ ಪ್ರಾರಂಭಿಸುವುದು ಇಲಾಖೆ ಯೋಜನೆಯಾಗಿದೆ.
10ನೇ ಸ್ಥಾನದತ್ತ ಯತ್ನ:
2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90.12 ರಿಸಲ್ಟ್‌ನೊಂದಿಗೆ ರಾಜ್ಯದಲ್ಲೇ 14ನೇ ಸ್ಥಾನದಲ್ಲಿತ್ತು. 2023-24ನೇ ಸಾಲಿನಲ್ಲಿ ಶೇ.74.28ರ ಫಲಿತಾಂಶದೊಂದಿಗೆ 23ನೇ ಸ್ಥಾನ ಗಳಿಸಿತ್ತು. ಈ ಬಾರಿ 10ರೊಳಗೆ ಸ್ಥಾನ ಪಡೆಯಲು ಇಲಾಖೆ ಸರ್ವಪ್ರಯತ್ನ ನಡೆಸುತ್ತಿದೆ.
ಫಲಿತಾಂಶಮುಖಿ ಗ್ರಂಥಾಲಯ ಸ್ಥಾಪಿಸಿ ಮಾದರಿ ಉತ್ತರ ಪತ್ರಿಕೆಗಳು, ಸ್ಕೋರಿಂಗ್ ಪಾಸಿಂಗ್ ಪ್ಯಾಕೇಜ್ನಂತಹ ಮಾದರಿ ಕೈಪಿಡಿ, ವ್ಯಾಕರಣ, ಅನ್ವಯಿಕ ಪ್ರಶೋತ್ತರಗಳ ಪತ್ರಿಕೆಗಳನ್ನು ಇರಿಸುವುದು. ಹತ್ತು ವರ್ಷದ ಶಾಲಾ ಟಾಪರ್‌ಗಳ ಭಾವಚಿತ್ರ-ಅಂಕಗಳು, ಈಗಿನ ವ್ಯಾಸಂಗ ಮತ್ತು ಸಾಧನೆ ವಿವರವನ್ನು ಪ್ರಕಟಿಸಿ ಪ್ರೇರಣೆ ತುಂಬುವ ಉದ್ದೇಶವಿದೆ.
ಎಸ್ಸೆಸ್ಸೆಲ್ಸಿ ನಂತರದ ವ್ಯಾಸಂಗಕ್ಕೆ ವಿವಿಧ ಕೌಶಲಾಧಾರಿತ ಕೋರ್ಸ್, ಅದರ ಮಾಹಿತಿಗೆ ದಾಖಲೆಗಳನ್ನು ಕೊಠಡಿಯೊಂದರಲ್ಲಿ  ಸಂಗ್ರಹಿಸಿಡಲು ಸೂಚನೆ ನೀಡಲಾಗಿದೆ. ಶೇ.40ಕ್ಕಿಂತ ಕಡಿಮೆ ಅಂಕ ಪಡೆದ 47 ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದು ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರತಿ ಶಾಲೆಯ ಟಾಪರ್‌ಗಳ ಮಾಹಿತಿ ಪಡೆದು ವಾಟ್ಸ್‌ಆ್ಯಪ್ ರಚಿಸಿ ಶಿಬಿರಗಳ ಮೂಲಕ ಆತ್ಮವಿಶ್ವಾಸ ಮೂಡಿಸುವುದು ಈ ವರ್ಷದ ಗುರಿಯಾಗಿದೆ.

ಶೈಕ್ಷಣಿಕ ಗುಣಮಟ್ಟ ಸಾಧಿಸಲು ಶಿಕ್ಷಕರನ್ನು ಸನ್ನದ್ಧಗೊಳಿಸಲಾಗುತ್ತಿದೆ. ಬೆಳಗ್ಗೆ ಒಂದು ತಾಸು, ಸಂಜೆ ಅರ್ಧ ತಾಸು ಕಾಲ ಮಕ್ಕಳಿಗೆ ಪರಿಹಾರ ಬೋಧನೆ ನಡೆಸಲಾಗುವುದು. ಗುರುರಾಜ ಕರ್ಜಗಿಯಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಲ್ಲಿ ಶೈಕ್ಷಣಿಕ ಪ್ರೇರಣೆ ಕೊಡಿಸುವ ಚಿಂತನೆ ಇದೆ.
ಜಿ. ಕೊಟ್ರೇಶ್
ಡಿಡಿಪಿಐ.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net