ಬುಡಕಟ್ಟು, ಪರಿಶಿಷ್ಟರ ಆರ್ಥಿಕತೆಗೆ ಶ್ರಮವಹಿಸಿ  ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ

1000501285.jpg
Published on

ದಾವಣಗೆರೆ: ದಾವಣಗೆರೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆದು ಕ್ಷೇತ್ರದ ಬುಡಕಟ್ಟು, ಪರಿಶಿಷ್ಟ ಪಂಗಡ ಜನರ ಆರ್ಥಿಕಾಭಿವೃದ್ಧಿ ಹಾಗೂ ಈ ಸಮುದಾಯಕ್ಕೆ ಮೂಲ ಸೌಕರ್ಯ, ಆಶ್ರಮ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ ಜನಜಾತಿಯ ಗೌರವ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿವಾಸಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಪಂಚವಾರ್ಷಿಕ ಅವಧಿಯ ವನಧನ್ ಯೋಜನೆಯ ಸಮರ್ಪಕ ಅನುಷ್ಠಾನದೊಂದಿಗೆ ಅತ್ಯುತ್ತಮ ಜಿಲ್ಲೆ ಎಂದು ಹೆಸರು ಗಳಿಸಬೇಕಿದೆ. ಕೇಂದ್ರ ಸರ್ಕಾರ ಬುಡಕಟ್ಟು ಜನರ ಅಭಿವೃದ್ದಿಗಾಗಿ ಜಾರಿಗೊಳಿಸಿದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿ, ಜಿಲ್ಲೆಯ ಜನರ ಅಭಿವೃದ್ಧಿಗೆ ಕ್ರಮ ವಹಿಸಬೇಕಿದೆ ಎಂದರು.
ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಜನಜಾತಿಯ ಗೌರವ ದಿನವಾಗಿ ಪ್ರತಿ ವರ್ಷ ನ.15ರಂದು ಆಚರಿಸಲಾಗುತ್ತಿದೆ. ಬಿರ್ಸಾ ಅವರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಎಂದು ಸ್ಮರಿಸಿದರು.
ಆದಿವಾಸಿಗಳ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಹಾಗೂ  ಧರ್ತಿ ಆಬಾ ಜನಜಾತಿಯ ಉತ್ಕರ್ಷ ಅಭಿಯಾನ ಕಾರ್ಯಕ್ರಮಗಳ ಅಡಿಯಲ್ಲಿ ಆದಿವಾಸಿಗಳಿಗೆ ಹಾಗೂ ಎಸ್‌ಟಿ ಜನರ ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗಕ್ಕೆ ನೆರವು ಕಲ್ಪಿಸಲಾಗುತ್ತಿದೆ.
ಪ್ರಧಾನ ಮಂತ್ರಿ ವನಧನ್ ಯೋಜನೆಯಡಿ ಜಿಲ್ಲೆಯ ಸ್ವಸಹಾಯ ಸಂಘದ ಮಹಿಳಾ ಗುಂಪುಗಳಿಗೆ 37 ಲಕ್ಷ ರೂ. ವೆಚ್ಚದಲ್ಲಿ, ಅಗರಬತ್ತಿ ತಯಾರಿಕೆ, ಅಡಕೆ ಕತ್ತರಿಸುವ ಯಂತ್ರ, ಎಣ್ಣೆ ಗಾಣ, ಹಿಟ್ಟಿನ ಗಿರಣಿ, ಅಡಕೆ ತಟ್ಟೆ ಹಾಗೂ ರೊಟ್ಟಿ ಮಾಡುವ ಯಂತ್ರಗಳು ಸೇರಿ 22 ವಿವಿಧ ಪರಿಕರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬುಡಕಟ್ಟು ಸಮುದಾಯದ ಗುಂಪುಗಳಿಗೆ ಸ್ವ ಉದ್ಯೋಗದ ವಿವಿಧ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಯಿತು. ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಯೋಜನಾ ನಿರ್ದೇಶಕ ರೇಷ್ಮಾ ಕೌಸರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net