

ದಾವಣಗೆರೆ: ಗ್ರಾಮೀಣ ಪ್ರದೇಶಗಳಿಗೂ ಇ-ಟೆಂಡರ್ ಖರೀದಿ ಪ್ರಕ್ರಿಯೆ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲೆಯ ರೈತರ ಒಕ್ಕೂಟವು ಎಪಿಎಂಸಿ ಜಂಟಿ ನಿರ್ದೇಶಕಿ ಎಚ್‌ಎಂಸಿ ರಾಣಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ.
ಜಿಲ್ಲಾ ರೈತರ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ ದಾವಣಗೆರೆ ಎಪಿಎಂಸಿ ವ್ಯಾಪ್ತಿಯಲ್ಲಿ ಇ-ಟೆಂಡರ್‌ನಲ್ಲಿ ಖರೀದಿ ಪ್ರಕ್ರಿಯೆಯಿಂದಾಗಿ ಭತ್ತ, ಮೆಕ್ಕೆಜೋಳ ಧಾರಣೆಯಲ್ಲಿ ಏರಿಕೆ ಆಗುತ್ತಿದೆ. ಇ-ಟೆಂಡರ್ ಖರೀದಿ ಪದ್ಧತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಕಣ ಅಥವಾ ಕಾಂಕ್ರೀಟ್ ರಸ್ತೆಗಳಲ್ಲಿ ರಾಶಿ ಹಾಕಿರುವ ಧಾನ್ಯಗಳಿಗೂ ಅನ್ವಯ ಮಾಡಿದಲ್ಲಿ ಹಳ್ಳಿಗಳಲ್ಲಿ ಧಾರಣೆಯೂ ಏರಿಕೆ ಆಗಲಿದೆ ಎಂದು ತಿಳಿಸಿದರು.
ಹಳ್ಳಿಗಳಿಗೂ ಇ-ಟೆಂಡರ್ ಪದ್ಧತಿ ವಿಸ್ತರಣೆ ಮಾಡಬೇಕಾದರೆ ರೈತರು ಮಾರುಕಟ್ಟೆಗೆ ನಿತ್ಯ ಬೆಳಗ್ಗೆ 9 ಗಂಟೆಗೆ ಸ್ಯಾಂಪಲ್ ತರಲು ಎಪಿಎಂಸಿ ವ್ಯವಸ್ಥೆ ಮಾಡಬೇಕು. ಪ್ರತಿ ಸ್ಯಾಂಲ್‌ಗೂ ಲಾಟ್ ನಂಬರ್ ನೀಡಿ ಖರೀದಿಸಬೇಕು. ಹೀಗಾದಲ್ಲಿ ಮಧ್ಯವರ್ತಿ, ದಲಾಲರ ಹಾವಳಿ ತಪ್ಪಲಿದೆ ಎಂದು ಹೇಳಿದರು.
ಕಡ್ಡಾಯವಾಗಿ ವೇಮೆಂಟ್-ಪೇಮೆಂಟ್ ಪದ್ಧತಿ ಜಾರಿಗೆ ತರಬೇಕು. ಹಣ ಪಾವತಿಗೆ ಖರೀದಿದಾರರು ವಿಳಂಬ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು. ವೇಮೆಂಟ್ ಪ್ರತಿಯಲ್ಲಿ ಖರೀದಿದಾರರ ಜತೆಗೆ ರೈತರ ಹೆಸರು, ಊರು ಹಾಗೂ ಖರೀದಿಸಿದ ಬೆಲೆ ನಮೂದಿಸಬೇಕು. ಇದರಿಂದ ರೈತರು ಬ್ಯಾಂಕ್ ಖಾತೆಗೆ ಹಣ ಜಮೆ ಖಾತ್ರಿಪಡಿಸಿಕೊಳ್ಳಬಹುದು.
ಶ್ಯೂಟ್ ಪಡೆಯುವುದನ್ನು ಹಾಗೂ ಡಿಸ್ಕೌಂಟ್ ಪದ್ಧತಿಯನ್ನು ನಿಷೇಧಿಸಬೇಕು. ಎರಡಕ್ಕೂ ಒತ್ತಾಯಿಸಿದವರನ್ನು ಬಂಧಿಸುವ ಕ್ರಮ ಕೈಗೊಳ್ಳಬೇಕು. ಹಮಾಲರ ಕೂಲಿಯನ್ನು ಸಂಪೂರ್ಣವಾಗಿ ಖರೀದಿದಾರರೇ ಭರಿಸಬೇಕು. ಹಮಾಲರು ಸ್ಯಾಂಪಲ್, ತಳಗಾಳು ಪಡೆಯುವುದನ್ನು ನಿಷೇಧಿಸಬೇಕು ಎಂದು ರೈತರ ಒಕ್ಕೂಟ ಆಗ್ರಹಿಸಿತು.
ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್, ಲೋಕಿಕೆರೆ ನಾಗರಾಜ್, ವಿಜಯಲಕ್ಷ್ಮೀ ವೀರಮಾಚಿನೇನಿ, ಎ.ವೈ.ಪ್ರಕಾಶ್, ಧನಂಜಯ ಕಡ್ಲೆಬಾಳ್, ಗೋಣಿವಾಡ ಮಂಜುನಾಥ, ರುದ್ರನಕಟ್ಟೆ ಪರಮೇಶ್ವರಪ್ಪ, ಆರುಂಡಿ ಪುನೀತ್, ಮಾಜಿ ಮೇಯರ್ ವಸಂತಕುಮಾರ್, ಅಣಬೇರು ಕುಮಾರಸ್ವಾಮಿ, ಶಿವಪ್ರಕಾಶ್, ಗೋಪನಾಳ್ ಪಾಲಾಕ್ಷಪ್ಪ, ವಡ್ಡಿನಹಳ್ಳಿ ಸಿದ್ದೇಶ್, ಆರನೇ ಕಲ್ಲು ವಿಜಯಕುಮಾರ್, ಕಾಶಿಪುರ ಸುರೇಶ್, ಕುರ್ಕಿ ರೇವಣಸಿದ್ದಪ್ಪ, ಐಗೂರು ತಿಪ್ಪೇಸ್ವಾಮಿ ಇತರರಿದ್ದರು.