ಒಳಮೀಸಲು ಜಾರಿಗಾಗಿ ಜಗಳೂರಲ್ಲಿ ತಮಟೆ ಚಳವಳಿ

1000452998.jpg
Published on

ದಾವಣಗೆರೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ವಯ ಒಳಮೀಸಲು ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಜಗಳೂರಿನಲ್ಲಿ ತಮಟೆ ಚಳವಳಿ ನಡೆಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರತಿಭಟನಾಕಾರರು, ತಮಟೆ ಮತ್ತು ಉರುಮೆ ಬಾರಿಸುತ್ತ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದಿರುವ ಜಾತಿಗಳ ಅಭಿವೃದ್ಧಿ ಸದುದ್ದೇಶದಿಂದ ಒಳಮೀಸಲಾತಿ ಅವಶ್ಯಕ. ಇದನ್ನು ಆಯಾ ಜಾತಿಗಳಿಗೆ ನೀಡುವ ಸಾಂವಿಧಾನಿಕ ಅಧಿಕಾರವು ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿ ತೀರ್ಪು ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಆದೇಶವನ್ನು ನಿರ್ಲಕ್ಷೃ ಮಾಡಿದಂತಿದೆ ಎಂದು ದೂರಿದರು.
ಮಾದಿಗ ಸಮಾಜದ ತಾಲೂಕಾಧ್ಯಕ್ಷ ಜಿ.ಎಚ್.ಶಂಭುಲಿಂಗಪ್ಪ ಮಾತನಾಡಿ, ಸಂವಿಧಾನಬದ್ಧ ಮೀಸಲು ಸೌಲಭ್ಯ ಪಡೆಯಲು ಏಳು ದಶಕಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಆದರೆ, ನಮಗೆ ಇನ್ನು ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ಚಲವಾದಿ ಸಮಾಜದ ಮುಖಂಡ ವೀರಸ್ವಾಮಿ ಮಾತನಾಡಿ, ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಪರಿಗಣಿಸಿ ಒಳ ಮೀಸಲು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಚುನಾವಣೆಗೂ ಮುನ್ನ ಒಳ ಮೀಸಲು ಜಾರಿಗೊಳಿಸುವ ಭರವಸೆ ನೀಡಿ, ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ, ನಮ್ಮ ಋಣ ತೀರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡರಾದ ಪೂಜಾರಿ ಸಿದ್ದಪ್ಪ, ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ಹನುಮಂತಾಪುರ ಸತೀಶ್, ಬೈರಾನಾಯಕನಹಳ್ಳಿ ಚಂದ್ರಪ್ಪ, ನಿಬಗೂರು ಮುನಿಯಪ್ಪ, ಗುತ್ತಿದುರ್ಗ ರುದ್ರೇಶ್, ಮೂಡಲ ಮಾಚಿಕೆರೆ ಸತೀಶ್, ಮೆದಗಿನಕೆರೆ ತಿಮ್ಮೇಶ್, ಚಲವಾದಿ ನಿಜಲಿಂಗಪ್ಪ, ಯಲ್ಲಪ್ಪ, ಗೋಡೆ ದುರುಗಪ್ಪ, ಪಲ್ಲಾಗಟ್ಟೆ ರಂಗಪ್ಪ, ರೇಣುಕೇಶ್, ಗೌರಿಪುರ ಸತ್ಯಮೂರ್ತಿ ಮತ್ತಿತರರಿದ್ದರು.

ಬೇಡಿಕೆಗಳೇನು?
ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲು ಜಾರಿಗೊಳಿಸಬೇಕು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಒಳಮೀಸಲಾತಿ ಕಲ್ಪಿಸಿಕೊಡುವುದಾಗಿ ಘೋಷಿಸಿಕೊಂಡಂತೆ ನಡೆದುಕೊಳ್ಳಬೇಕು. ಮೀಸಲಾತಿ ಜಾರಿ ಮಾಡುವ ತನಕ ಬ್ಯಾಕ್‌ಲಾಗ್ ಮತ್ತಿತರ ಹುದ್ದೆಗಳ ನೇಮಕಾತಿ ರದ್ದುಪಡಿಸಬೇಕು. ಗೊಂದಲ ಸೃಷ್ಟಿಸುವ ಜಾತಿ ಜನಗಣತಿ ವರದಿಯನ್ನು ಕೈಬಿಡಬೇಕು.
ವಿಧಾನಸೌಧ ಮುತ್ತಿಗೆಯ ಎಚ್ಚರಿಕೆ
ಮಾದಿಗ ಮತ್ತು ಚಲವಾದಿ ಸಮುದಾಯಗಳ ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಿಎಂ ಆದೇಶಿಸಬೇಕು. ಅ. 24ರ ಕ್ಯಾಬಿನೇಟ್ ಸಭೆಯಲ್ಲಿ ಘೋಷಿಸಬೇಕು. ದಿನ ಮುಂದೂಡಿದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ಸಮಾಜದ ಮುಖಂಡ ಗ್ಯಾಸ್ ಓಬಣ್ಣ ಎಚ್ಚರಿಕೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net