ಅಣುಬಾಂಬ್‌ಗಿಂತಲೂ ಡ್ರಗ್ಸ್ ಅಪಾಯಕಾರಿ

1000974140.jpg
Published on

ದಾವಣಗೆರೆ: ಅಣುಬಾಂಬ್‌ಗಿಂತಲೂ ಮಾದಕ ವ್ಯಸನ ಬಲು ಅಪಾಯಕಾರಿ. ಇದರಿಂದ ಯುವಜನರ ಭವಿಷ್ಯವಲ್ಲದೆ ದೇಶವೇ ನಾಶವಾಗಲಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಗರದ ಪಿ.ಬಿ.ರಸ್ತೆಯ ರೇಣುಕ ಮಂದಿರದಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡ ಹಾಗೂ ಶ್ರೀಮಂತ ದೇಶ ಎರಡನ್ನೂ ಕಾಡುತ್ತಿರುವುದು ಡ್ರಗ್ಸ್ ಮಾಫಿಯಾ. ಇದಕ್ಕೆ ಯುವಜನರು ಬಲಿಯಾದಲ್ಲಿ ಕುಟುಂಬವೇ ನಾಶವಾಗುತ್ತದೆ. ಮಾದಕ ವ್ಯಸನ ಎಂಬುದು ಕತ್ತಲ ಪ್ರಪಂಚ. ಈ ಜಾಲದಿಂದ ಯುವ ಸಮೂಹ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಡ್ರಗ್ಸ್ ಮಾರಾಟ ಮಾಡುವವರು ನಿಮ್ಮನ್ನು ಸೆಳೆಯಬಹುದು. ಕಿಡಿಗೇಡಿಗಳು ಡ್ರಗ್ಸ್ ಮೂಲಕ ಯುವಕರನ್ನು ದುರ್ಮಾರ್ಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ 1933 ಅಥವಾ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ತಿಳಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠ್ಠಲ್ರಾವ್ ಮಾತನಾಡಿ, ಮಾದಕ ವಸ್ತುಗಳ ಸೇವಿಸುವ ಮುನ್ನ ಕುಟುಂಬದ ಭವಿಷ್ಯದ ಕುರಿತು ಆಲೋಚಿಸಬೇಕು. ಮಾದಕ ವಸ್ತುಗಳ ಮಾರಾಟ ಕಾನೂನಿನನ್ವಯ ಅಪರಾಧ. ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನಾವು 300ಕ್ಕೂ ಹೆಚ್ಚು ಶಾಲೆ, 1000 ಕ್ಕೂ ಹೆಚ್ಚು ಮಕ್ಕಳಿಗೆ ಮಾದಕ ವ್ಯಸನ ವಿರುದ್ಧವಾಗಿ ಅರಿವು ಮೂಡಿಸಿದ್ದೇವೆ. ಜಿಲ್ಲೆಯಲ್ಲಿ 3 ವರ್ಷದಲ್ಲಿ 409 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಡ್ರಗ್ಸ್ ಕಾಯ್ದೆಯನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತಂದು ನಶಾಮುಕ್ತ ಅಭಿಯಾನ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಾದಕ ವ್ಯಸನ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್, ಬಿ. ಶರಣ ಬಸವೇಶ್ವರ, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಡಿಡಿಪಿಐ ಜಿ.ಕೊಟ್ರೇಶ್, ಚಲನಚಿತ್ರ ನಟಿ ಅದಿತಿ ಪ್ರಭುದೇವ್ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಮಾದಕ ದ್ರವ್ಯ ವ್ಯಸನ ವಿರುದ್ಧ ಜಾಥಾ ನಡೆಸಲಾಯಿತು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ, ಮಹಾವೀರ ಮ. ಕರೆಣ್ಣವರ ಹಸಿರುನಿಶಾನೆ ತೋರಿದರು.

ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿದರು. ಕೆಲ ವಿದ್ಯಾರ್ಥಿನಿಯರು ಮುಖದ ಮೇಲೆ ಮಾದಕ ದ್ರವ್ಯ ವಿರೋಧಿ ಬರಹಗಳ ಸಹಿತ ಬಣ್ಣ ಹಚ್ಚಿಸಿಕೊಂಡು ಗಮನ ಸೆಳೆದರು.

ದೇವರಿತ್ತ ಬದುಕನ್ನು ಸುಂದರವಾಗಿಸಿ

ಚಿತ್ರನಟಿ ಅದಿತಿ ಪ್ರಭುದೇವ ಅನಿಸಿಕೆ

ಬೇರೊಬ್ಬರ ಕ್ರಿಯೆಗಳು, ಅವರ ಭವಿಷ್ಯದ ಕುರಿತು ವ್ಯರ್ಥ ಆಲೋಚನೆ ಮಾಡದಿರಿ. ಅದರ ಬದಲಾಗಿ ದೇವರು ಕೊಟ್ಟ ಸಮಯ ಅಥವಾ ಬದುಕನ್ನು ನಿಮಗಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳಿ, ಸುಂದರವಾಗಿಸಿಕೊಳ್ಳಿ ಎಂದು ಚಿತ್ರನಟಿ ಅದಿತಿ ಪ್ರಭುದೇವ ಹೇಳಿದರು.

ಎಷ್ಟೋ ಜನ್ಮದ ಬಳಿಕ ಮಾನವ ಜನ್ಮದ ಪುಣ್ಯ ನಮಗೆ ಸಿಕ್ಕಿದೆ. ನಮ್ಮ ಜತೆ ಪಾಲಕರು, ಸ್ನೇಹಿತರು ಇರೋದಿಲ್ಲ. ಬದಲಾಗಿ ನಮ್ಮ ಶರೀರ, ಮನಸ್ಸು ಇರಲಿದೆ. ಅದನ್ನು ಪ್ರೀತಿಸಿ. ನೀವು ಮೊದಲು ಧೈರ್ಯ, ಆತ್ಮವಿಶ್ವಾಸದಿಂದ ಬದುಕು ಸಾಗಿಸಿ. ಇನ್ನೊಬ್ಬರಿಗೆ ಸ್ಫೂರ್ತಿಯಾಗುವಂತಹ ಕೆಲಸ ಮಾಡಿ. ಆಗ ಜೀವನ ಸುಂದರವಾಗಲಿದೆ ಎಂದು ಕಿವಿಮಾತು ಹೇಳಿದರು.

ಮೊಬೈಲ್ ಬೆಂಕಿ ಇದ್ದ ಹಾಗೆ. ಅದರಿಂದ ಅನ್ನ ಬೇಯಿಸಲೂ ಬಹುದು; ಮನೆಗೆ ಬೆಂಕಿ ಹಚ್ಚಲೂ ಬಹುದು. ಮೊಬೈಲ್ ನನಗೆ ಎಷ್ಟು ಉಪಯೋಗ? ಸಾಧನೆಗೆ ಪೂರಕವೆ? ಅದರಿಂದ ನಿಜವಾದ ಖುಷಿ ಸಿಗುತ್ತದೆಯೇ? ಎಂಬುದನ್ನು ವಿವೇಚನೆ ಮಾಡಿ ಬಳಸಿ ಎಂದು ತಿಳಿಸಿದರು.

ದಾವಣಗೆರೆಯ ಮಕ್ಕಳು ಎಲ್ಲಿಯಾದರೂ ಸಿಕ್ಕರೆ ವೈದ್ಯ, ಇಂಜಿನಿಯರ್, ಸಮಾಜಸೇವೆ ಮಾಡುತ್ತಿದ್ದೇನೆ ಎಂದೋ, ಸಂಕಷ್ಟದಲ್ಲಿದ್ದ ಒಂದಷ್ಟು ಶ್ವಾನಗಳನ್ನು ರಕ್ಷಣೆ ಮಾಡಿದ್ದೇನೆ ಎಂದುಕೊಳ್ಳಬೇಕು ಎಂದು ಬಯಸುತ್ತೇನೆ. ನಿಮ್ಮ ಸಹಜತೆ ಮತ್ತು ಮುಗ್ಧತೆ ಜೀವನದುದ್ದಕ್ಕೂ ಇರಲಿ ಎಂದು ಹೇಳಿದರು.

ಸ್ಥಳದಲ್ಲೇ ನಗದು ಬಹುಮಾನ!

ತಮ್ಮ ಸಲಹೆಯಂತೆ ಪಕ್ಕದಲ್ಲೇ ನಿಂತು ಒಂದೆರಡು ನಿಮಿಷ ಧೈರ್ಯದಿಂದ ಮಾತನಾಡಿದ ಸಿದ್ದವೀರಪ್ಪ ಶಾಲೆಯ ವಿದ್ಯಾರ್ಥಿನಿ ವಸುಧಾಗೆ ನಟಿ ಅದಿತಿ ಪ್ರಭುದೇವ ಅವರು 10 ಸಾವಿರ ರೂ. ಬಹುಮಾನವನ್ನು ಸ್ಥಳದಲ್ಲೇ ನೀಡಿ ಗಮನ ಸೆಳೆದರು! ನಂತರ ವಿದ್ಯಾರ್ಥಿನಿಯ ಕಣ್ಣಾಲಿ ತುಂಬಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net