ದಾವಣಗೆರೆ ಡಿಆರ್‌ಆರ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

61
Published on

ದಾವಣಗೆರೆ: ತಮ್ಮ ಅಧ್ಯಯನಕ್ಕಾಗಿ ಶೈಕ್ಷಣಿಕ ಜೀವನದುದ್ದಕ್ಕೂ ಡಾ. ರಾಧಾಕೃಷ್ಣನ್ ವಿದ್ಯಾರ್ಥಿವೇತನ ಪಡೆದಿದ್ದರು. ಇದು ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಸಂಸ್ಥೆ ಆಡಳಿತಾಧಿಕಾರಿ ಎಂ. ಬಸವರಾಜಪ್ಪ ಹೇಳಿದರು.

ನಗರದ ಡಿಆರ್‌ಆರ್ ಪ್ರೌಢಶಾಲೆಯಲ್ಲಿ ಗುರುವಾರ ಸರ್ವಪಲ್ಲಿ ರಾಧಾಕೃಷ್ಣನ್ ಅವರ 137 ಜನ್ಮ ದಿನ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ವೆಲ್ಲೂರಿನ ವೂರ್ಹಿಸ್ ಕಾಲೇಜು ಮತ್ತು ಮದ್ರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ನಂತರ ಪ್ರಾಧ್ಯಾಪಕರಾದರು. ಭಾರತದ ಸ್ವಾತಂತ್ರ್ಯದ ಮೊದಲು ಅವರನ್ನು ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಸಂಬೋಧಿಸಲಾಗುತ್ತಿತ್ತು. ಸ್ವಾತಂತ್ರ್ಯದ ನಂತರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಕರೆಯಲಾಯಿತು ಎಂದು ಮಾಹಿತಿ ನೀಡಿದರು.

ಎಲ್ಲರಿಗೂ ಪ್ರೋತ್ಸಾಹ ದೊರೆಯಲೆಂಬ ಉದ್ದೇಶದಿಂದ ವಿದ್ಯಾಸಂಸ್ಥೆಯಲ್ಲಿ ಓದಿದ ಪ್ರತಿಭಾವಂತರಿಗೆ ಪುರಸ್ಕಾರ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳೂ ಉತ್ತಮವಾಗಿ ಓದಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಚ್. ಎಸ್. ಹಾಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೆ ಗುರು, ಮುಂದೆ ಗುರಿ ಇದ್ದರೆ ರಣಧೀರರ ದಂಡು ಸೃಷ್ಟಿಯಾಗುತ್ತದೆ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್ ಇಲ್ಲ. ಶ್ರಮ ವಹಿಸಿದರೆ ಮಾತ್ರ ಯಶಸ್ಸು ಲಭಿಸಲು ಸಾಧ್ಯ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿನುತಾ ಎನ್., ಶ್ರೀಗೌರಿ ಅವರಿಗೆ ಆಡಳಿತ ಮಂಡಳಿಯಿಂದ ಬೆಳ್ಳಿಪದಕ ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ಬಿ.ಸಿ. ಚಿರಾಗ್ ಹಾಗೂ ಎ.ಟಿ. ವೈಷ್ಣವಿ ಅವರಿಗೆ ದಿ. ನರಸಿಂಹ ಮೂರ್ತಿಯವರ ಸ್ಮರಣಾರ್ಥ ನಗದು ಮತ್ತಿತರ ಬಹುಮಾನಗಳನ್ನು ವಿತರಿಸಲಾಯಿತು.

ಸೇವೆಯಿಂದ ನಿವೃತ್ತರಾದ ಶಿಕ್ಷಕ ಕೆ.ಎಂ. ಶಿವಾನಂದಯ್ಯ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರಾದ ನಂದಿತ ಈ.ಕೆ. ಮತ್ತು ಸಂಗಡಿಗರು ಪ್ರಾರ್ಥಿಸಿದರು. ಲಕ್ಷ್ಮೀಬಾಯಿ ಎಲ್. ಸ್ವಾಗತಿಸಿದರು. ಕುಶಾಲ್ ಎಂ. ಐರಣಿ ವಂದಿಸಿದರು. ಕಾವೇರಿ ರೋಖಡೆ ಮತ್ತು ಕಾವ್ಯ ಆರ್. ನಿರೂಪಿಸಿದರು.

ವಿವಿಧ ವಿಭಾಗದ ಮುಖ್ಯ ಶಿಕ್ಷಕರಾದ ಎಂ.ಎಂ. ಬಸವನಗೌಡ, ಆರ್. ಭೋಜರಾಜ್ ಯಾದವ್, ಕೆ.ಎಲ್. ರಾಧಾ, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net