ಗ್ರಾಮೀಣ ಕಲಾವಿದರೇ ನಟ-ನಟಿ ಪರಂಪರೆ ರಕ್ಷಕರು

1000510383.jpg
Published on

ದಾವಣಗೆರೆ: ಗ್ರಾಮೀಣ ಕಲಾವಿದರು ಸ್ವತಃ ನಾಟಕಗಳನ್ನು ರಚಿಸಿ, ಹಾಡುಗಾರಿಕೆಯೊಂದಿಗೆ ಅಭಿನಯ, ನಿರ್ದೇಶನ ಮಾಡುತ್ತಾರೆ. ನಟಿಯರನ್ನು ಬೇರೆಡೆಗಳಿಂದ ಕರೆತರುತ್ತಾರೆ. ನೃತ್ಯ, ಸಂಗೀತದ ಜತೆಗೆ ನಟ-ನಟಿ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದವರು ಗ್ರಾಮೀಣ ಕಲಾವಿದರು ಎಂದು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು..
ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ  ಹಮ್ಮಿಕೊಂಡಿದ್ದ, ಬಳ್ಳಾರಿ ಜಿಲ್ಲೆಯ ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಪ್ರಸ್ತುತಿಯ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು ಇತ್ಯಾದಿ ಕಡೆಗಳಲ್ಲಿ ಯಥೇಚ್ಛವಾಗಿ ಪೌರಾಣಿಕ ನಾಟಕಗಳು ಪ್ರದರ್ಶನವಾಗುತ್ತವೆ. ಸಂಸ್ಕೃತಿಗೆ ಧಕ್ಕೆ ಬಾರದಂತೆ ಹಾಗೂ ರಂಗಶಿಸ್ತಿನಿಂದ ಅಭಿನಯಿಸುವವರು ಗ್ರಾಮೀಣ ಕಲಾವಿದರು ಎಂದು ಹೇಳಿದರು.
ಕರ್ನಾಟಕದಲ್ಲಿ ವರ್ಷಕ್ಕೆ 15ರಿಂದ 18 ಸಾವಿರ ನಾಟಕಗಳು ಪ್ರದರ್ಶನ ಆಗುತ್ತವೆ. ಇದರ ರೂವಾರಿಗಳು ಗ್ರಾಮೀಣ ಕಲಾವಿದರು. ಕಂಪನಿಗಳು ನಡೆಸುವ ರಂಗ ಪ್ರಯೋಗಗಳಷ್ಟೇ ವೃತ್ತಿ ನಾಟಕಗಳಲ್ಲ. ಗ್ರಾಮೀಣ ಜನರ ಪ್ರದರ್ಶನವೂ ಆಗಿವೆ ಎಂದು ಹೇಳಿದರು.
ಆಧುನಿಕ ರಂಗಭೂಮಿಯಲ್ಲಿ ಗ್ರಾೃಂಡ್ ರಿಹರ್ಸಲ್ ಎಂದು ಕರೆಯಲ್ಪಟ್ಟರೆ, ಗ್ರಾಮೀಣ ನಾಟಕಗಳಲ್ಲಿ ಕರೆಯಲ್ಪಡುವ ಗೆಜ್ಜೆಪೂಜೆ ಂಬ ಪರಿಭಾಷೆ ನೀಡಿದವರೂ ಗ್ರಾಮೀಣರು ಎಂದು ತಿಳಿಸಿದ ಅವರು ಅಶ್ವಥ್ ನಿರ್ದೇಶನದಲ್ಲಿ ಶ್ರೀಕೃಷ್ಣ ಸಂಧಾನ ನಾಟಕಕ್ಕೆ ಸಾವಿರ ಪ್ರದರ್ಶನ ಕಂಡ ಹೆಗ್ಗಳಿಕೆ ಇದೆ ಎಂದು ಸ್ಮರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕಗಳ ಬಿಡುಗಡೆಗಳ ಜತೆಯಲ್ಲೇ ಕಲೆ, ನಾಟಕ ಪ್ರದರ್ಶನಗಳಿಗೂ ಉತ್ತೇಜನ ನೀಡುತ್ತ ಬಂದಿದೆ ಎಂದರು.
ವೃತ್ತಿ ರಂಗಭೂಮಿ ರಂಗಾಯಣ, ಜಿಲ್ಲಾ ಕಸಾಪ, ರಂಗ ಅನಿಕೇತನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಂಗಕರ್ಮಿ ಬಾ.ಮಾ.ಬಸವರಾಜಯ್ಯ, ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ರಂಗ ಅನಿಕೇತನ ತಂಡದ ಮುಖ್ಯಸ್ಥೆ ಎಚ್.ಎನ್. ಸುಧಾ ಇದ್ದರು. ಧಾತ್ರಿ ರಂಗಸಂಸ್ಥೆ ಕಲಾವಿದರು ದಾವಣಗೆರೆಯ ಎನ್. ಭೀಮೇಶ್ ಹಾಲೊಳ್ ನಿರ್ದೇಶನದಲ್ಲಿ ನಾಟಕ ಪ್ರದರ್ಶಿಸಿದರು.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net