

ಡಿ.ಎಂ.ಮಹೇಶ್, ದಾವಣಗೆರೆ
ನವರಾತ್ರಿ ಉತ್ಸವ ಎಂದರೆ ಹೆಂಗಳೆಯರಿಗೆ ಎಲ್ಲಿಲ್ಲದ ಸಡಗರ. ಇನ್ನೊಂದೆಡೆ ಮನೆ-ಮನೆಗಳಲ್ಲಿ ಗೊಂಬೆ ಕೂರಿಸುವ ಮಹಿಳೆಯರ ನಡುವೆ ಒಂದು ಸಣ್ಣ ಸ್ಪರ್ಧೆಯೇ ನಡೆಯುತ್ತದೆ. ಆದರೆ ಇಲ್ಲೊಬ್ಬರು ಯಾವ ಪೈಪೋಟಿ, ಪ್ರಚಾರಕ್ಕೆ ಆಸ್ಪದವಿಲ್ಲದೆ ವರ್ಷಂಪ್ರತಿ ಗೊಂಬೆ ಕೂರಿಸುವ ಪದ್ಧತಿ ಅನುಸರಿಸುತ್ತ ಬಂದಿದ್ದಾರೆ.
ನಗರದ ಎಸ್‌ಎಸ್ ಬಡಾವಣೆ ಬಿ ಬ್ಲಾಕ್‌ನ ಎರಡನೇ ಮುಖ್ಯರಸ್ತೆಯ ನಿವಾಸಿ ಸುಮಾ ಮುರುಗೇಂದ್ರಪ್ಪ ಅವರ ಮನೆ ಹೊಕ್ಕರೆ ಸಾಕು ಗೊಂಬೆಗಳ ದರ್ಶನವಾಗುತ್ತದೆ. ಜನರಿಗಾಗಿ ಅಲ್ಲದೇ ಇದ್ದರೂ ಮನಸ್ಸಂತೋಷಕ್ಕೆಂದು ಕಳೆದ 10 ವರ್ಷದಿಂದ ದಸರಾ ಗೊಂಬೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಯಾರು ಬರಲಿ, ಬಿಡಲಿ ಬೊಂಬೆಗಳನ್ನು ವರ್ಷಕ್ಕೊಮ್ಮೆ ಜೋಡಿಸುವ ಹಾಗೂ ಹಬ್ಬ ಮುಗಿದಂತೆ ಅಷ್ಟೇ ಜತನದಿಂದ ರಕ್ಷಿಸಿಡುವ ಅವರ ಖಯಾಲಿ, ಉತ್ಸಾಹ ಮಾತ್ರ ಬತ್ತಿಲ್ಲ.
ಕರ್ನಾಟಕದ ಸಾಂಪ್ರದಾಯಿಕ ಗೊಂಬೆಗಳ ದರ್ಶನ ಎಲ್ಲೆಡೆ ಮಾಮೂಲು. ಆದರಿಲ್ಲಿ ದಕ್ಷಿಣ ಆಫ್ರಿಕಾ, ನೈಜೇರಿಯಾ, ಗಾನಾ, ಜಾಂಬಿಯಾ, ಕೀನ್ಯಾ, ತಾಂಜೇನಿಯಾ, ಈಜಿಫ್ಟ್, ಯುರೋಪ್ ಮೊದಲಾದ ರಾಷ್ಟ್ರಗಳ ವಸ್ತುಗಳು, ಆಕರ್ಷಕ ಗೊಂಬೆಗಳ ಪುಟ್ಟ ಸಂಗ್ರಹವಿರುವುದೇ ವಿಶೇಷ. ಅಲ್ಲಿನ ವಿವಿಧ ಬುಡಕಟ್ಟು ಜನಾಂಗದವರು ನಿತ್ಯಜೀವನದಲ್ಲಿ ಬಳಸುವ ಮತ್ತು ಪ್ರದರ್ಶನಾ ಸಾಮಗ್ರಿಗಳ ದಾಸ್ತಾನಿದೆ.
ಗಜರಾಜನ ಪಡೆಯೊಂದಿಗೆ ಸಾಗುವ ಮೈಸೂರು ದಸರಾ ಮೆರವಣಿಗೆಗೆ ಆಫ್ರಿಕಾದ ವಾದ್ಯಗಾರರ ಸಮ್ಮಿಲನ ಇಲ್ಲಿದೆ! ಉಳಿದಂತೆ ಪಟ್ಟದ ಗೊಂಬೆಗಳು, ಅಷ್ಟಲಕ್ಷಿಯರು, ದಶಾವತಾರ, ಶ್ರೀರಾಮ-ಸೀತೆ, ಆಂಜನೇಯ, ರಾಘವೇಂದ್ರ ಸ್ವಾಮಿ, ಪುರಿ ಜಗನ್ನಾಥ, ಶ್ರೀನಾಥಜೀ ದೇವರು, ದಾಸಶ್ರೇಷ್ಠರು, ಬದರೀನಾಥ, ಕೇದಾರನಾಥ ದೇಗುಲ ಮಾದರಿಗಳು, ಬುದ್ಧ, ನಟರಾಜ, ಮದುವೆ ದಿಬ್ಬಣ, ಕರಕುಶಲ ಕೆಲಸಗಾರರು, ಶೆಟ್ಟರ ಕಿರಾಣಿಯಂಗಡಿ, ಗಾರುಡಿ ಗೊಂಬೆಗಳು ಇಲ್ಲಿ ಕಾಣಸಿಗಲಿವೆ. ಮಹಾಗೌರಿ ಮುಂಚೂಣಿಯಲ್ಲಿ ಇರುತ್ತಾಳೆ.
ನವರಾತ್ರಿಯ ಆಯಾ ದಿನದ ವಿಶೇಷತೆಗೆ ತಕ್ಕಂತೆ ಬಣ್ಣದ ಬಟ್ಟೆಯೊಂದಿಗೆ ದೇವಿಯನ್ನು ಅಲಂಕರಿಸುವ ಸುಮಾ, ಸಂಜೆ ದೀಪ ಬೆಳಗಿ ನಾಮಾವಳಿ ಪಠಿಸುತ್ತಾರೆ. ನೋಡಲು ಬಂದ ನೆರೆಹೊರೆಯವರಿಗೆ ಉಡಿದುಂಬುವ ಸಂಪ್ರದಾಯ ಅನುಸರಿಸುತ್ತಿದ್ದಾರೆ.
ಸುಮಾ ಅವರ ಪತಿ, ಟೆಕ್ಸ್‌ಟೈಲ್ ಇಂಜಿನಿಯರ್ ಆಗಿದ್ದ ಬಿ.ಕೆ. ಮುರುಗೇಂದ್ರಪ್ಪ ಹಲವು ವರ್ಷ ನೈಜೇರಿಯಾದಲ್ಲಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸಿ ಈಗ ಸ್ವದೇಶಕ್ಕೆ ಮರಳಿದ್ದಾರೆ. ಹೋದೆಡೆಯೆಲ್ಲಲ್ಲ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ತಂದ ವಸ್ತುಗಳೇ ದಸರಾ ಬೊಂಬೆ ಮನೆಯ ಆಕರ್ಷಣೆಯಾದವು. ಅಲ್ಲಿಂದ ತಂದ ವಸ್ತುಗಳಿಗೆ ಲೆಕ್ಕವಿಲ್ಲ. ಮೌಲ್ಯದಲ್ಲೂ ಅಂದು-ಇಂದು ಅಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಾರವರು.
ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯಲ್ಲಿ ನನ್ನ ಅಜ್ಜಿ ಆರಂಭದಲ್ಲಿ ಗೊಂಬೆ ಕೂರಿಸುತ್ತಿದ್ದರು. ಆಯುಧಪೂಜೆಗೆ ಕೂಡಿಡುತ್ತಿದ್ದುದನ್ನು ನಾನು ಗಮನಿಸಿ ಅವರಿಗೆ ಸಹಕರಿಸುತ್ತಿದ್ದೆ. ಮನೆಯಲ್ಲಿ ಖರೀದಿಸಿ ತಂದ ವಸ್ತುಗಳನ್ನು ದಸರಾ ವೇಳೆ ಪ್ರದರ್ಶಿಸುತ್ತ ಬಂದಿದ್ದೇನೆ. ಐನೂರಕ್ಕೂ ಹೆಚ್ಚು ಗೊಂಬೆಗಳಿವೆ. ಎಲ್ಲೂ ಪ್ರಚಾರ ಮಾಡಿಲ್ಲ ಎಂಬುದು ಸುಮಾ ಅವರ ಮಾತು.
ಮೈಸೂರು ಪ್ರದೇಶಗಳಲ್ಲಿ ಕಂಡಂತೆ ಹತ್ತು ವರ್ಷದಿಂದ ದಸರಾ ಗೊಂಬೆಗಳನ್ನು ಕೂರಿಸುವ ವಾಡಿಕೆಯನ್ನು ನಡೆಸುತ್ತ ಬಂದಿದ್ದೇನೆ. ಇದರಿಂದ ನಮಗೆ ಖುಷಿ ಸಿಗುತ್ತದೆ. ಇದನ್ನು ನೋಡಿ ಹೋಗುವ ಮಕ್ಕಳು, ಯುವಕರಲ್ಲಿ ಸಂಸ್ಕಾರ, ದೇವರು-ಧರ್ಮದ ಬಗ್ಗೆ ಪರಿಚಯ ಆಗುತ್ತದೆ ಎಂಬುದೇ ಹೆಮ್ಮೆ.
ಸುಮಾ ಮುರುಗೇಂದ್ರಪ್ಪ
ಅನ್ಯ ರಾಷ್ಟ್ರದ ವಸ್ತುಗಳ ಆಕರ್ಷಣೆ
ಜರ್ಮನಿ, ಶ್ರೀಲಂಕಾ, ವಿಯೆಟ್ನಾ, ಜಪಾನ್‌ನ ಮುಖವಾಡಗಳು, ಈಜಿಫ್ಟ್‌ನಲ್ಲಿ ಸೋರೆಕಾಯಿಯಿಂದಲೇ ನಿರ್ಮಿಸಿದ ದೊಡ್ಡ ಗಾತ್ರದ ಚಮಚಾ, ಪೋರ್ಕ್, ಮಜ್ಜಿಗೆ-ಬೆಣ್ಣೆ ತೆಗೆಸಿರಿಸುವ ಆಕರ್ಷಕ ಬೌಲ್‌ಗಳು, ಕೀನ್ಯಾದ ಬೇಟೆಗಾರ, ಅಲ್ಲಿನ ಹಳ್ಳಿಯ ಸೊಡಗಿನ ಮಂದಿ, ನೈಜೇರಿಯಾದಲ್ಲಿನ ಪ್ರಮುಖ ಬುಡಕಟ್ಟುಗಳಾದ ಯುರೋಬ, ಹೌಸಾ, ಇಬೋ ಜನಾಂಗದ ಜೋಡಿಗಳು, ಮರದ ಕೆತ್ತನೆಯುಳ್ಳ ಅಲ್ಲಿಯೇ ನಿರ್ಮಿಸಿದ ಊರುಗೋಲು, ನೈಜೇರಿಯಾದಲ್ಲಿ ದನ ಕಾಯುವ ಕಸುಬಿನ ಪುಲಾನಿ ಸಮುದಾಯದವರು ನೀರಿಗಾಗಿ ಇರಿಸಿಕೊಳ್ಳುವ ನೀರಿನ ಬಾಟಲು, ಪಾದರಕ್ಷೆಗಳು, ಏಕಶಿಲೆಯಲ್ಲಿ ನಿರ್ಮಿಸಿದ ಆಕರ್ಷಕ ಗೊಂಬೆಗಳು, ಸ್ಪಟಿಕದಿಂದ ತಯಾರಿಸಲಾದ ಯುರೋಪಿನ ಗೃಹಾಲಂಕಾರ ವಸ್ತುಗಳು. ಹಿತ್ತಾಳೆಯಲ್ಲಿ ನಿರ್ಮಿಸಲಾದ ಪ್ರಾಣಿ, ಚಿಕ್ಕ ಪಾತ್ರೆ ಸಾಮಗ್ರಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.