ಕಣ್ಣಿಗೆ ಮುದ ನೀಡಿದ ಶ್ವಾನಗಳ ಜಾತ್ರೆ ದಾವಣಗೆರೆಗೆ ಬಂದ 185 ಅತಿಥಿಗಳು

pixlr_20250407010559314.jpg
Published on

ಡಿ.ಎಂ.ಮಹೇಶ್, ದಾವಣಗೆರೆ

ಮಾಲೀಕನಿಂದ ಬಂಗಾರದ ಕೂದಲು ತೀಡಿಸಿಕೊಳ್ಳುತ್ತಿದ್ದ ಎರಡು ವರ್ಷದ ಸಿಟ್ಜು (ಬಿಂಗೋ), ಬಿಸಿ ಹವಾಗುಣಕ್ಕೆ ಕೂತಲ್ಲೇ ಏದುಸಿರು ಬಿಡುತ್ತಿದ್ದ ರಾಟ್‌ವೀಲರ್ (ರಾಕ್ಸಿ), ಎದುರಾಳಿಯನ್ನು ಹೆದರಿಸುವಂತಿದ್ದ ತುಮಕೂರಿನ ದೈತ್ಯ ದೇಹಿ ಗ್ರೇಟ್‌ಡೇನ್, ನೀಲಿ ನಾಲಗೆ ಆಗಾಗ್ಗೆ ಹೊರಚಾಚುತ್ತಿದ್ದ ಚೌಚೌ..

ದಾವಣಗೆರೆಯ ಹೈಸ್ಕೂಲ್‌ಮೈದಾನದ ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಭಾನುವಾರ ಕಂಡುಬಂದ ವಿಶೇಷ ಅತಿಥಿಗಳಿವರು. ದಾವಣಗೆರೆ ಪೆಟ್ ಲವರ್ಸ್‌ ಅಸೋಸಿಯೇಷನ್‌ನಿಂದ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ಶ್ವಾನಪ್ರಿಯರ ಮನಕ್ಕೆ ಮುದ ನೀಡಿತು. ಇಷ್ಟವಾದ ನಾಯಿಗಳ ಮೈ ಸವರುತ್ತ ಫೋಟೋ ತೆಗೆದುಕೊಳ್ಳುವ ಖಯಾಲಿಯಲ್ಲಿ ಕೆಲವರು ಮುಳುಗಿದ್ದರು.

ಮೂರು ತಿಂಗಳ ಮರಿಯಿಂದ ಹಿಡಿದು 11 ವರ್ಷದ ಶ್ವಾನಗಳು ಸರಣಿ ಸಾಲಿನಲ್ಲಿ ಡಾಗ್ ವಾಕ್ ಮಾಡಿ ನೋಡುಗರನ್ನು ರಂಜಿಸಿದವು. ಹ್ಯಾಂಡ್ಲಿಂಗ್ ಮಾಡುತ್ತಿದ್ದ ಮಾಲೀಕರು ಪ್ರದರ್ಶನದ ಅಂಕಣದೊಳಗೆ ಕೆಲ ಕಾಲ ಶ್ವಾನಗಳ ಜತೆಯಲ್ಲೇ ಮಕ್ಕಳಂತಾಗಿದ್ದರು!

ಅವುಗಳಿಗೆ ನೀರಿನ ಬಾಟಲಿ, ತಿಂಡಿಯ ಚೂರು, ಗಾಳಿ ತೆಗೆದ ಫುಟ್‌ಬಾಲ್ ತೋರಿಸುತ್ತಿದ್ದರು. ಫೋಟೋಶೂಟ್‌ಗೇನೋ ಎಂಬಂತೆ ಶ್ವಾನಗಳ ಹಿಂಬದಿ ಕಾಲುಗಳನ್ನು ಅಗಲಿಸಿ ನಿಲ್ಲಿಸಲು ಮರಳಿ ಯತ್ನ ಮಾಡುತ್ತಲೇ ಇದ್ದರು! ಕೆಲವು ಶ್ವಾನಗಳು ಪಕ್ಕದ ನಾಯಿಯನ್ನು ಮಾತಾಡಿಸುವಂತೆ ಲುಕ್ ನೀಡುತ್ತಿದ್ದರೆ, ಕೆಲವು ಗದರುತ್ತಿದ್ದವು.

ಅತಿ ವಿರಳ ಜಾತಿಯ ಶ್ವಾನಗಳು ಪ್ರದರ್ಶನದಲ್ಲಿ ಸಾಕ್ಷಿಯಾದವು. ಪ್ರದರ್ಶನಕ್ಕೆಂದೇ ಹೇಳಿಮಾಡಿಸಿದ ಚೈನಾ ಮೂಲದ ಆಲಿಬೈ ಶ್ವಾನ ಮಂಗಳೂರಿನಿಂದ ಬಂದಿದ್ದರೆ, ಅಲ್ಲಿಂದಲೇ ಲಾಸಪ್ಸೋ ಕೂಡ ಬಂದಿತ್ತು. ಹುಬ್ಬಳ್ಳಿಯಿಂದ ಬಾಡರ್‌ಕುಲ್ಲಿ ತಳಿ, ಶಿವಮೊಗ್ಗದಿಂದ ಅಮೆರಿಕ ಮೂಲದ ಕಾಕಸ್ ಪೆನಲ್, ಅಮೆರಿಕನ್ ಬುಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಪದಾರ್ಪಣೆ ಮಾಡಿದ್ದವು.

ಬಿಸಿಲಿನ ದಾಹ ತಣಿಸಲು ಮಾಲೀಕರು ಮಂಜುಗಡ್ಡೆ, ನೀರು ಕುಡಿಸುತ್ತಿದ್ದರು. ಶುಷ್ಕ ಹವಾಗುಣಕ್ಕೆ ಹೊಂದದ ಕೆಲವು ಶ್ವಾನಗಳು ಹವಾನಿಯಂತ್ರಿತ ದುಬಾರಿ ಕಾರಿನೊಳಗೆ ಮಲಗಿದ್ದವು! ಕೆಲವನ್ನು ಕಿರಿಕಿರಿಯಾಗದಂತೆ ಇತರೆ ಶ್ವಾನಗಳನ್ನು ಪಂಜರದಲ್ಲಿ ಇರಿಸಲಾಗಿತ್ತು. ಕೆಲವಕ್ಕೆ ಹಸಿ ಬಟ್ಟೆಯ ಮೇಲೊದಿಕೆ ಇತ್ತು.

ಡಾಬರ್‌ಮನ್, ಜರ್ಮನ್ ಶೆಪರ್ಡ್, ಲ್ಯಾಬ್ರೋಡಾರ್, ಲ್ಯಾಶ್‌ಹಾಪ್ಸ್, ಸಿಟ್ಜು, ಪಮೇರಿಯನ್, ಪಿಟ್‌ಬುಲ್, ಬೆಲ್ಜಿಯಂ ಮೆಲೋನೆಸ್, ಗ್ರೇಟ್‌ಡೇನ್, ಬೀಗಲ್, ಪಗ್, ಫ್ರೆಂಚ್ ಬುಲ್‌ಡಾಗ್, ಗೋಲ್ಡನ್ ರಿಟ್ರೀವರ್, ರಾಟ್ ವೀಲರ್, ಡ್ಯಾಶ್‌ಹೌಂಡ್,ಹಸ್ಕಿ, ಬಾಕ್ಸರ್, ಸೇಂಟ್ ಬರ್ನಾಡ್, ಡಾಲ್ಮೇಷಿಯನ್, ಕರ್ನಾಟಕ ಮೂಲದ ಮುಧೋಳ್ ಸೇರಿ 40 ತಳಿಗಳ ಸುಮಾರು 185 ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು.

ಶ್ವಾನಗಳ ದೇಹ ಹಾಗೂ ಹಲ್ಲುಗಳ ರಚನೆ, ಸ್ನಾಯುಗಳು, ನಡಿಗೆ ಶೈಲಿ ಮತ್ತು ಮಾಲೀಕರ ಮಾತಿಗೆ ತಕ್ಕಂತೆ ವರ್ತಿಸುವ ಗುಣ ಎಲ್ಲ್ವನ್ನೂ ಅಳೆದು ತೂಗಿ ಬಹುಮಾನ ನೀಡಲಾಗುತ್ತದೆ ಎಂದು ಸಂಘಟಕರು ಹೇಳಿದರು.

ನಾನು ಮೊದಲ ಬಾರಿಗೆ ದಾವಣಗೆರೆ ಬಂದಿದ್ದೇನೆ. ನನ್ನ ಸಿಟ್ಜು ತಳಿಯ ಶ್ವಾನಕ್ಕೆ ಐದು ಕಡೆ ಬಹುಮಾನ ಬಂದಿವೆ. ರಾಯಲ್ ಕೆನನ್, ಚಿಕನ್, ಬಾಯ್ಲಡ್ ಎಗ್, ಮೊಸರನ್ನ ಇದರ ನಿತ್ಯದೂಟ. ಬಹುಮಾನ ಬರಲಿ, ಬಿಡಲಿ ಅವುಗಳ ಜತೆ ಭಾಗವಹಿಸುವುದೇ ಒಂದು ಖುಷಿ ಎಂದು ಹೇಳಿಕೊಂಡರು ಚಿಕ್ಕಮಗಳೂರಿನ ರೋಷನ್.

ನಮ್ಮ ಸಂಸ್ಥೆಯಿಂದ ಆಯೋಜಿಸಿದ ರಾಜ್ಯ ಮಟ್ಟದ ಏಳನೇ ಪ್ರದರ್ಶನವಿದು. ಬಿಸಿಲು ಹೆಚ್ಚಿದ್ದರಿಂದ ವಿಶಾಲ ಪೆಂಡಾಲ್ ಆವರಣದಲ್ಲಿ ಫ್ಯಾನ್‌ಗಳ ಆಯೋಜನೆ ಮಾಡಲಾಗಿತ್ತು. ಎಲ್ಲ ನಾಯಿಗಳಿಗೂ ಫುಡ್ ಸ್ಯಾಂಪಲ್‌ಗಳನ್ನು ನೀಡಲಾಯಿತು. ಅಲ್ಲದೆ ಉಚಿತ ಆರೋಗ್ಯ ತಪಾಸಣೆ ಕೂಡ ಆಯೋಜಿಸಲಾಗಿತ್ತು ಎಂದು ದಾವಣಗೆರೆ ಪೆಟ್ ಲವರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ನಲ್ಲೂರು ಎಸ್. ರಾಘವೇಂದ್ರ ಹೇಳಿಕೊಂಡರು.

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net