ದಿನಕ್ಕೊಂದು ದಾಂಪತ್ಯ ಬಿಡುಗಡೆ; ದಶಕದಲ್ಲಿ 2,649 ಡಿವೋರ್ಸ್!

Divorce 9 Feb 20
Published on

ದಾವಣಗೆರೆ: ಮದುವೆಯಾದಷ್ಟೇ ವೇಗವಾಗಿ ಜಿಲ್ಲೆಯಲ್ಲಿ ಅನೇಕರ ದಾಂಪತ್ಯ ಗೀತೆ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತಿದೆ. ಇಲ್ಲಿನ ನ್ಯಾಯಾಲಯಗಳಲ್ಲಿ ಡಿವೋರ್ಸ್ ಕೇಸು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು, ದಿನಕ್ಕೊಂದು ದಾಂಪತ್ಯ ಬಿಡುಗಡೆಯಾಗುತ್ತಿದೆ.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಕಾರ್ಯವ್ಯಾಪ್ತಿ ಹರಿಹರ- ದಾವಣಗೆರೆ ತಾಲೂಕುಗಳಿಗೆ ಸೀಮಿತವಾಗಿದೆ. ಈ ಅವಳಿ ತಾಲೂಕಿನಲ್ಲಿ 2009ರಿಂದ 2019 ರವರೆಗೆ ವಿಚ್ಛೇದನಕ್ಕೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಬರೋಬ್ಬರಿ 2,848. ಈವರೆಗೆ 2,649 ಪ್ರಕರಣಗಳಲ್ಲಿ ವಿಚ್ಛೇದನ ದೊರೆತಿದೆ. ಇನ್ನು ಚನ್ನಗಿರಿ, ಹೊನ್ನಾಳಿ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಲಯಗಳು, ಜಗಳೂರು ತಾಲೂಕಿನ ಜೆಎಂಎಫ್ ನ್ಯಾಯಾಲಯದಲ್ಲಿ ಇತರ ಕೇಸ್​ಗಳ ಜತೆಯಲ್ಲೇ ವಿಚ್ಛೇದನ ಪ್ರಕರಣವೂ ದಾಖಲಾಗುತ್ತಿವೆ.

ಇನ್ನು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ವೊಂದರಲ್ಲೇ ವರ್ಷಕ್ಕೆ ಸರಾಸರಿ 200ರಿಂದ 300 ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ. ಇತರ ಕೋರ್ಟ್ ಗಳ ವ್ಯಾಜ್ಯಗಳನ್ನು ಸರಿದೂಗಿಸಿದರೆ ಜಿಲ್ಲೆಯಲ್ಲಿ ದಿನಕ್ಕೆ ಕನಿಷ್ಠ ಒಂದು ಡಿವೋರ್ಸ್ ಕೇಸ್ ಇತ್ಯರ್ಥವಾಗುತ್ತಿದೆ.

ಜಿಲ್ಲಾ ಕೌಟುಂಬಿಕ ನ್ಯಾಯಾಲಯಲ್ಲಿ ಬೇರ್ಪಟ್ಟ ದಂಪತಿಯ ಅಪ್ರಾಪ್ತ ಮಕ್ಕಳ ಉಸ್ತುವಾರಿ ಕುರಿತಂತೆ 1980ರ ರಕ್ಷಕರು ಮತ್ತು ವಾರ್ಡ್ ಕಾಯ್ದೆಯಲ್ಲಿ 33 ಪ್ರಕರಣ (ನವೆಂಬರ್ ಅಂತ್ಯಕ್ಕೆ) ಇತ್ಯರ್ಥವಾಗ ಬೇಕಿದೆ. ವಿಚ್ಛೇದನ ಬಯಸುವವರಲ್ಲಿ ನವ ವಿವಾಹಿತರೇ ಹೆಚ್ಚಿನವರು. ವಿದ್ಯಾವಂತರಲ್ಲದೆ ಗ್ರಾಮೀಣ ಜನರಲ್ಲೂ ಈ ವ್ಯಸನ ಸಮನಾಗಿದೆ. ಸಿಆರ್​ಪಿಸಿ 125ರ ಅಡಿ ಜೀವನಾಂಶ ಕೋರಿ ಅರ್ಜಿಗಳು ಹೆಚ್ಚು ಬರುತ್ತಿವೆ ಎಂದು ಹೇಳುತ್ತವೆ ಮೂಲಗಳು.

ಇತ್ತೀಚೆಗೆ ಅವಿಭಕ್ತ ಕುಟುಂಬ ಪದ್ಧತಿ ನಶಿಸುತ್ತಿದೆ. ಜನರಲ್ಲಿ ನೈತಿಕ ಮೌಲ್ಯಗಳ ಕೊರತೆ ಕಾಡುತ್ತಿವೆ. ಆಧುನಿಕ ಮತ್ತು ವೈಭವದ ಜೀವನ ಕೂಡ ವಿಚ್ಛೇದನದ ಕಾರಣಗಳಲ್ಲಿ ಒಂದಾಗಿದೆ. | ನ್ಯಾ.ಬಿ.ಎಲ್. ಜಿನರಾಳಕರ್, ಜಿಲ್ಲಾ ಕೌಟುಂಬಿಕ ನ್ಯಾಯಾಲಯ

 | ಡಿ.ಎಂ. ಮಹೇಶ್ ದಾವಣಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net