

ಹೊನ್ನಾಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದ ಶಾಲೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಖಚಿತ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಎಚ್. ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿಯುತ ಶಾಲೆ ಸಭಾಂಗಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿರುವ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪ್ರೌಢಶಾಲೆ ಮುಖ್ಯಶಿಕ್ಷಕರು ತಮ್ಮ ಶಾಲೆಯ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ನಿರಂತರವಾಗಿ ಚರ್ಚಿಸಬೇಕು. ವಿಳಂಬವಿಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಹಂತದಲ್ಲಿ ಯಾವುದೇ ರೀತಿಯ ಸಮಸ್ಯೆ ಹಾಗೂ ಅಗತ್ಯ ಕಂಡು ಬಂದಲ್ಲಿ ಜಿಲ್ಲಾಡಳಿತದ ಸಹಾಯ ಹಾಗೂ ಮಾರ್ಗದರ್ಶನ ಪಡೆಯಲು ಹಿಂಜರಿಕೆ ಬೇಡ ಎಂದರು.
ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕದೆ ಅವರನ್ನು ವಿಶ್ವಾಸಕ್ಕೆ ತೆಗದುಕೊಂಡು ಕೆಲಸ ಮಾಡಿದರೆ ಶೇ. 100 ರಷ್ಟು ಫಲಿತಾಂಶ ಬರುತ್ತದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರನ್ನು ಮತ್ತು ಶಾಲೆಗಳನ್ನು ಉಳಿಸಿಕೊಳ್ಳಲು, ಬೋಗಸ್ ಮಕ್ಕಳ ದಾಖಲಾತಿ ಮತ್ತು ಹಾಜರಾತಿಗೆ ಕಡಿವಾಣ ಹಾಕಬೇಕು. ಇಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದರು.
ಟ್ರೇಲರ್ ಸೂಪರ್, ಕ್ಲೈಮಾಕ್ಸ್ ಬಾಕಿ : ಕಳೆದ ಮೂರು ತಿಂಗಳಲ್ಲಿ ಫಲಿತಾಂಶ ಸುಧಾರಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ, ಅಂತಿಮ ಪರೀಕ್ಷೆಯ ಫಲಿತಾಂಶ ಬಾಕಿ ಇದೆ. ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಪಂ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಶೂನ್ಯ ಫಲಿತಾಂಶ ಹಾಗೂ ಶೇ.40 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆ ಶಿಕ್ಷಕರೊಂದಿಗೆ ಮಾತನಾಡಿ, ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿ. ಶಿಕ್ಷಕರ ಕೊರತೆ ಇದ್ದರೆ ಕೂಡಲೇ ಗಮನಕ್ಕೆ ತಂದರೆ ಹೊಂದಾಣಿಗೆ ಮಾಡಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಎಲ್ಲರೂ ಸೇರಿ ಈ ಬಾರಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ ಅತ್ಯುತ್ತಮ ಫಲಿತಾಂಶ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೊಟ್ರೇಶ್, ಹೊನ್ನಾಳಿ ಬಿಇಒ ನಿಂಗಪ್ಪ ಮತ್ತು ಚನ್ನಗಿರಿ ಬಿಇಒ ಜಯಪ್ಪ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಡಯಟ್‌ನ ಉಪನಿರ್ದೇಶಕಿ ಗೀತಾ, ಹೊನ್ನಾಳಿ ಕ್ಷೇತ್ರ ಸಂಯೋಜನಾಧಿಕಾರಿ ತಿಪ್ಪೇಶಪ್ಪ, ಅಕ್ಷರದಾಸೋಹ ಅಧಿಕಾರಿ ನಾಗೇಂದ್ರಪ್ಪ, ಬಿ.ಆರ್.ಪಿ. ಮುದ್ದನಗೌಡ, ಬೆಸ್ಕಾಂ ಇಲಾಖೆ ಕಾರ್ಯಪಾಲಕ ಅಭಿಯಂತರ ರವಿಕಿರಣ್, ಎಇಇ ಜಯಪ್ಪ, ನ್ಯಾಮತಿ ತಾಲೂಕಿನ ಶ್ರೀನಿವಾಸ್, ದಾವಣಗೆರೆ ಇಒ ಪ್ರಕಾಶ್, ಸಾಯಿ ಗುರುಕುಲ ಆಡಳಿತ ಮಂಡಳಿ ಪ್ರದೀಪ್ ಗೌಡ ಸೇರಿ ಇತರರಿದ್ದರು.