

ಡಿ.ಎಂ. ಮಹೇಶ್, ದಾವಣಗೆರೆ: ಬಹು ಜಿಲ್ಲೆಗಳ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿರುವ ಚಿಗಟೇರಿ ಜಿಲ್ಲಾಸ್ಪತ್ರೆ ತಾನೇ ಮೇಜರ್ ಸರ್ಜರಿಯ ಪಟ್ಟಿಯಲ್ಲಿದೆ. ಆದರೆ, ಆಗೊಮ್ಮೆ ಹೀಗೊಮ್ಮೆ ಸಾಂದರ್ಭಿಕ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತ ಮೆತ್ತಗಾಗಿದೆ!
1961ರ ಏ.20ರಂದು ನಾಗರಿಕರ ಸೇವೆ ಸಮರ್ಪಣೆಗೊಂಡು, 1968ರ ಮೇನಲ್ಲಿ ಸಾರ್ವಜನಿಕ ಆಸ್ಪತ್ರೆಯಾಗಿ ಅಭಿವೃದ್ಧಿ ಕಂಡಿದ್ದ ಈ ಆಸ್ಪತ್ರೆ 1976ರ ಸೆ.20ರಂದು ಮುಖ್ಯ ಕಟ್ಟಡ ನಿರ್ಮಾಣದೊಂದಿಗೆ ಮೇಲ್ದರ್ಜೆಗೆ ಏರಿತ್ತು. 930 ಹಾಸಿಗೆಗಳ ಸಾಮರ್ಥ್ಯವುಳ್ಳ ಈ ಜಿಲ್ಲಾಸ್ಪತ್ರೆ ಕಟ್ಟಡದ ಅನಾರೋಗ್ಯಕ್ಕೆ ಶಾಶ್ವತ ಮದ್ದು ಸಿಗುತ್ತಿಲ್ಲ!!
ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಬಡವರು, ಮಧ್ಯಮವರ್ಗದ ಜನರು ಬರುವ ನಮ್ಮೂರಿನ ದೊಡ್ಡಾಸ್ಪತ್ರೆ ಸ್ಥಿತಿ ಇದು. ತಿಂಗಳಿಗೆ ಕಡಿಮೆ ಎಂದರೂ 2 ಸಾವಿರ ಮಂದಿ ಹೊರಹೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 450ರಿಂದ 500 ಹೆರಿಗೆ ಆಗುತ್ತಿವೆ. ಆದರೂ ಈ ಆಸ್ಪತ್ರೆಯ ಪ್ರಸವ ವೇದನೆ ಸರ್ಕಾರಕ್ಕೆ ಅರ್ಥವಾದಂತಿಲ್ಲ.
ಮೂಲಗಳ ಪ್ರಕಾರ ಆಸ್ಪತ್ರೆ ಕಟ್ಟಡದ ತೇಪೆ ಕೆಲಸಕ್ಕೆ 2010ರಿಂದ 2015ರ ವರೆಗೆ 11 ಕೋಟಿ ರೂ. ವೆಚ್ಚವಾಗಿದೆ. ಅಡುಗೆಮನೆ ಎದುರಿನ (ಪೂರ್ವಭಾಗ) ಕಟ್ಟಡ ಪೇಂಟಿಂಗ್‌ನೊಂದಿಗೆ ಅಂದಗೊಂಡು ಇದೇನಾ ಆಸ್ಪತ್ರೆ ಎಂದು ಹುಬ್ಬೇರಿಸುವಂತಿದೆ. ಆದರೆ, ಪಶ್ಚಿಮ ಭಾಗ ಸೇರಿ ಉಳಿದೆಲ್ಲ ಭಾಗಗಳಲ್ಲಿ ಅದೇ ರಾಗ ಅದೇ ಹಾಡು.
ಕುಸಿದು ಬೀಳುತ್ತಿವೆ ಸಜ್ಜಾ: ಅಲ್ಲಲ್ಲಿ ಕಬ್ಬಿಣದ ಸರಳು ಕಾಣುವ ಸಜ್ಜಾ-ಪಿಲ್ಲರ್‌ಗಳು ಭಯ ಹುಟ್ಟಿಸಿವೆ. ಈಗಾಗಲೆ ಎರಡು ಮೂರು ಬಾರಿ ಸಜ್ಜಾದ ಸಿಮೆಂಟ್ ಚಕ್ಕಳ ಕಳಚಿ ಬಿದ್ದು ರೋಗಿಗಳು ಗಾಯಗೊಂಡು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಆಸ್ಪತ್ರೆಯ ಒಳಚರಂಡಿ ಕೆಲವೊಮ್ಮೆ ಕಟ್ಟಿಕೊಳ್ಳುವ ಜತೆಗೆ ದುರ್ವಾಸನೆ ಬೀರುತ್ತದೆ.
ಆಸ್ಪತ್ರೆಯ ಸೆಂಟ್ರಲ್ ಬ್ಲಾಕ್, ಓಟಿ ಬ್ಲಾಕ್, ಉತ್ತರ ಬ್ಲಾಕ್ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಆರ್‌ಸಿಸಿ ಮತ್ತು ಕಾಂಕ್ರೀಟ್ ಪಿಲ್ಲರ್‌ಗಳ ಕಬ್ಬಿಣದ ಸರಳುಗಳು ಹೊರ ಚಾಚಿ ತುಕ್ಕು ಹಿಡಿಯುವ ಹಂತದಲ್ಲಿವೆ. ಕೆಲವೆಡೆ ಸಿಮೆಂಟ್ ಕಳಚಿಕೊಂಡ ಸಜ್ಜಾಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಆಸ್ಪತ್ರೆ ಸುತ್ತಲಲ್ಲಿ ಸಿಮೆಂಟ್ ರಸ್ತೆಗಳು ಆಗಬೇಕಿವೆ.
ಮಳೆಗಾಲದಲ್ಲಿ ನಡುಕ: ಮಳೆಗಾಲ ಬಂದರಂತೂ ಕೆಲವು ವಾರ್ಡ್‌ಗಳಲ್ಲಿ ನಡುಕ ಶುರುವಾಗುತ್ತದೆ. ಚಾವಣಿ ಸೋರುವ ಜತೆಗೆ ಅಲ್ಲಲ್ಲಿ ತುಂಡಾದ ವಿದ್ಯುತ್ ವೈರ್‌ಗಳು ಜೋತುಬಿದ್ದು ಅನಾಹುತಕ್ಕೆಡೆ ಮಾಡುವಂತಿದೆ. ಮುಖ್ಯ ಕಟ್ಟಡದ ಸನಿಹದ ಹೆರಿಗೆ ವಿಭಾಗದ ಕಟ್ಟಡ ಕೂಡ ಇದರಿಂದ ಹೊರತಾಗಿಲ್ಲ. ಮಂಜೂರಾದ ಪೌರಕಾರ್ಮಿಕರ ಹುದ್ದೆಗಳಲ್ಲಿ ಬಹುತೇಕರು ಹೊರಗುತ್ತಿಗೆಯಡಿ ನಿಯೋಜನೆಯಾಗಿದ್ದು ಸ್ವಚ್ಛತೆ ನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ ಎಂಬುದು ಕೆಲವರ ಅಭಿಪ್ರಾಯ.
ಕೇಳುವರಿಲ್ಲ ಓವರ್‌ಹೆಡ್ ಟ್ಯಾಂಕ್: ಆಸ್ಪತ್ರೆ ಆವರಣದಲ್ಲಿನ ಏಕೈಕ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು ಬಣ್ಣ ಮಾಸಿ ಹಲವು ವರ್ಷಗಳೇ ಉರುಳಿವೆ. ಸುಮಾರು 2 ಲಕ್ಷ ಲೀ. ಸಂಗ್ರಹಣಾ ಸಾಮರ್ಥ್ಯವುಳ್ಳ ಈ ಟ್ಯಾಂಕ್‌ನಿಂದಲೇ ಆಸ್ಪತ್ರೆಗೆ ನೀರು ಸರಬರಾಜು ಆಗುತ್ತಿದೆ. ಇತ್ತೀಚೆಗೆ ಈ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಸದ್ಯಕ್ಕೆ ಕಲುಷಿತ ನೀರಿನ ಯಾವುದೇ ದೂರು ಬಂದಿಲ್ಲ.
31 ಕೋಟಿ ರೂ. ನೆರವಿನ ನಿರೀಕ್ಷೆ: ವರ್ಷದಿಂದ ವರ್ಷಕ್ಕೆ ಕಟ್ಟಡದ ಸಮಸ್ಯೆಗಳು ಏರುತ್ತಿದ್ದು ಅಷ್ಟೇ ಹಣದ ಬೇಡಿಕೆಯೂ ಹೆಚ್ಚುತ್ತಿದೆ. ಅಗತ್ಯ ಕಟ್ಟಡ ಕಾಮಗಾರಿ ಹಾಗೂ ನವೀಕರಣಕ್ಕೆಂದು 2020ನೇ ವರ್ಷದಲ್ಲಿ 24 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಎಸ್‌ಟಿ ಹಾಗೂ ದರ ಪಟ್ಟಿಯನ್ವಯ 31.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತ ಬೇಕಿದೆ.
2021-22ನೇ ಸಾಲಿನ ಆಯವ್ಯಯಕ್ಕೆ ಸೇರಿಸುವಂತೆ ಅಂದಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯಿಂಗ್ ಘಟಕದ ಪ್ರಧಾನ ಇಂಜಿನಿಯರ್‌ಗೆ ಪತ್ರ ಬರೆದಿದ್ದರು. ನಿರೀಕ್ಷಿತ ಅನುದಾನ ಬಂದಲ್ಲಿ ಆಗಸ್ಟ್‌ನಲ್ಲಿ ಕೆಲಸ ಶುರು ಮಾಡುವ ಇರಾದೆಯಲ್ಲಿದೆ ಆಸ್ಪತ್ರೆಯ ಆಡಳಿತಯಂತ್ರ. ಕೆಎಚ್‌ಆರ್‌ಡಿಪಿಯಿಂದ ಶೀಘ್ರ 11 ಕೋಟಿ ರೂ.ಗಳ ಕ್ರಿಯಾಯೋಜನೆ ತಯಾರಾಗುವ ಇಂಗಿತವಿದೆ.
ಚಿಗಟೇರಿ ಆಸ್ಪತ್ರೆಯ ನವೀಕರಣಕ್ಕೆ ಬೇಕಿರುವ 31 ಕೋಟಿ ರೂ. ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ತಾಯಿ-ಮಗು ಆಸ್ಪತ್ರೆ ಉದ್ಘಾಟನೆಯಾದಲ್ಲಿ ಹೆರಿಗೆ ಆಸ್ಪತ್ರೆ ವಾರ್ಡ್‌ಗಳು ಅಲ್ಲಿಗೆ ಸ್ಥಳಾಂತರವಾಗಲಿವೆ. ನಂತರ ಚಿಗಟೇರಿ ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಆ ಜಾಗಕ್ಕೆ ತಾತ್ಕಾಲಿಕವಾಗಿ ಶಿಫ್ಟ್ ಮಾಡಿ ಬಾಕಿ ಕೆಲಸ ಆರಂಭಿಸುವ ಇರಾದೆ ಇದೆ.
l ಡಾ. ಎಂ.ಬಿ. ನಾಗೇಂದ್ರಪ್ಪ, ಚಿಗಟೇರಿ ಆಸ್ಪತ್ರೆ ಅಧೀಕ್ಷಕ.
ಆಸ್ಪತ್ರೆ ಅಧೀಕ್ಷಕರು ಅನುದಾನಕ್ಕೆ ಪತ್ರ ಬರೆದು ಕುಳಿತರೆ ಸಾಲದು. ಸಚಿವರು, ಶಾಸಕರ ಮೇಲೆ ಒತ್ತಡ ತರಬೇಕು. ಆಸ್ಪತ್ರೆ ಒಳಗೆ ಸ್ವಚ್ಛತೆ ಮರೀಚಿಕೆಯಾಗಿದೆ. ಹಾಸಿಗೆಗಳು ನೈರ್ಮಲ್ಯವಾಗಿಲ್ಲ. ಎಂಆರ್‌ಐ ಸ್ಕಾೃನ್ ಯಂತ್ರ ಇಲ್ಲದ್ದರಿಂದ ಜನರು ಬೇರೆಡೆ ಹೋಗುವ ಸ್ಥಿತಿ ಇದೆ.
l ಟಿಂಕರ್ ಮಂಜಣ್ಣ, ಆರೋಗ್ಯ ರಕ್ಷಾ ಸಮಿತಿ ಮಾಜಿ ಸದಸ್ಯ.