ದಾವಣಗೆರೆಗೆ ಎರಡನೇ ಕೋವಿಡ್ ಲ್ಯಾಬ್

COVID LAB 25
Published on

ದಾವಣಗೆರೆ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಏರಿಳಿತವಾಗುತ್ತಿದೆ. ಇದರ ಪರೀಕ್ಷೆಗೆ ಶಿವಮೊಗ್ಗ, ಪುಣೆ ಇತರೆಡೆಯ ಲ್ಯಾಬ್‌ಗಳಿಗೆ ಗಂಟಲು ದ್ರವಗಳನ್ನು ಕಳಿಸಬೇಕಾಗಿತ್ತು. ವರದಿ ಬರುವುದು ತಡವಾಗುತ್ತಿತ್ತು. ಇದನ್ನು ತಪ್ಪಿಸಲು ಎಸ್ಸೆಸ್ ಆಸ್ಪತ್ರೆ ನಂತರ ಇದೀಗ ನಗರದಲ್ಲಿ ಎರಡನೇ ನೂತನ ಆರ್‌ಟಿಪಿಸಿಆರ್ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದೆ.
ಬಾಪೂಜಿ ವಿದ್ಯಾಸಂಸ್ಥೆಯಡಿಯ ಜೆಜೆಎಂ ವೈದ್ಯಕೀಯ ಕಾಲೇಜಿನ ಮೈಕ್ರೋ ಬಯಾಲಜಿ ವಿಭಾಗದ ಮೊದಲ ಅಂತಸ್ತಿನಲ್ಲಿ ಈ ಕೇಂದ್ರ ಶನಿವಾರದಿಂದ ಕಾರ್ಯಾರಂಭ ಮಾಡಿದ್ದು, ಮಂಗಳವಾರ ಮಧ್ಯಾಹ್ನ 1-30ಕ್ಕೆ ಇದರ ಅಧಿಕೃತ ಚಾಲನೆಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ನಿಜಲಿಂಗಪ್ಪ ಆಡಳಿತ ವಿಭಾಗದಲ್ಲಿ ವಿದ್ಯುತ್ ಬಟನ್ ಒತ್ತುವ ಮೂಲಕ ಉದ್ಘಾಟಿಸುವರು.
ಈ ಲ್ಯಾಬ್ ಸ್ಥಾಪನೆಯ ರೂವಾರಿಗಳಾದ ಸಂಸ್ಥೆಯ ಗೌರವ ಕಾರ್ಯದರ್ಶಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಭಾಗವಹಿಸುವರು.
ಹಿಂದೆ ಇದ್ದ ವೈದ್ಯಕೀಯ ಯಂತ್ರೋಪಕರಣಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಕೇಂದ್ರ ಆರಂಭಿಸಲಾಗಿದೆ. ಉಸಿರಾಟದ ತೊಂದರೆ ಮತ್ತು ಕರೊನಾ ರೋಗ ಲಕ್ಷಣವುಳ್ಳ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರಾವಣವನ್ನು ಬಾಪೂಜಿ ಹೊರರೋಗಿಗಳ ವಿಭಾಗದ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ ಸಂಗ್ರಹಿಸಿ, 6ರಿಂದ 7 ತಾಸಿನೊಳಗೆ ಪರೀಕ್ಷೆ ನಡೆಸಲಾಗುವುದು. ಜ್ವರ ಮತ್ತು ಉಸಿರಾಟದ ರೋಗ ಲಕ್ಷಣಗಳನ್ನು ಸ್ವಯಂಚಾಲಿತವಾಗಿ ತಯಾರಿಸಲಾದ ಥರ್ಮಲ್ ಇಮೇಜ್ ಯಂತ್ರದಿಂದ ಪತ್ತೆ ಹಚ್ಚಲಾಗುತ್ತದೆ. ಇದರ ಆಧಾರದಡಿ ಉಷ್ಣ ಕ್ಯಾಮೆರಾಗಳ ಮುಖಾಂತರ ಏಕಕಾಲಕ್ಕೆ ಜನರನ್ನು ತಪಾಸಣೆಗೆ ಒಳಪಡಿಸಿ, ಉಷ್ಣತೆಯನ್ನು ಅಳೆಯಬಹುದು. ದಿನದಲ್ಲಿ ಸದ್ಯಕ್ಕೆ 45 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಶೀಘ್ರದಲ್ಲೇ ಮತ್ತೊಂದು ಯಂತ್ರ ಬರಲಿದೆ. ಇದರ ಮೂಲಕ ಒಟ್ಟಿಗೆ 120ಕ್ಕೂ ಹೆಚ್ಚಿನ ಮಾದರಿಗಳ ಫಲಿತಾಂಶ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net