

ದಾವಣಗೆರೆ: ಅಗತ್ಯವಿರುವ ಗ್ರಾಮಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದು ಹಾಗೂ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗಳೂರು ತಾಲೂಕು ಮೂಡಲ ಮಾಚಿಕೆರೆ ಗ್ರಾಮದಲ್ಲಿ ಮನೆಗಳಿಗೆ ನೀರು ಕಲ್ಪಿಸಲು ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಚರಂಡಿ ನೀರು ಮಿಶ್ರಣವಾಗಿ ಪೂರೈಕೆಯಾಗುತ್ತಿದ್ದ ಹಿನ್ನಲೆಯಲ್ಲಿ ಪರಿಶೀಲಿಸಲಾಗಿ ಪೈಪ್‌ಲೈನ್ ಒಡೆದು ಹೋಗಿದ್ದನ್ನು ಗ್ರಾಪಂನಿಂದ ದುರಸ್ತಿಗೊಳಿಸಿ ಕುಡಿವ ನೀರು ಒದಗಿಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು. ಗ್ರಾಪಂ ಅಥವಾ ಸ್ಥಳೀಯ ಅನುದಾನದಲ್ಲಿ ಹೊಸ ಪೈಪ್‌ಲೈನ್ ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಗಳೂರಲ್ಲಿ ಕೆರೆಯ ಹಿಂಭಾಗ ಸುಮಾರು ವರ್ಷಗಳಿಂದ 40 ಕೊರಚ ಸಮುದಾಯದ ಕುಟುಂಬಗಳು ವಾಸವಿದ್ದು, ಬಿರುಸು ಮಳೆಯಿಂದಾಗಿ ಗುಡಿಸಲುಗಳು ಹಾಳಾಗಿವೆ. ಬಸ್ ನಿಲ್ದಾಣ ಬಳಿಯ 53 ಮಳಿಗೆಗಳ ಹರಾಜು ಆಗಿದ್ದು, ಗುಡಿಸಲು ಕಳೆದುಕೊಂಡು ಮಳಿಗೆಗಳಲ್ಲಿದ್ದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಖಾಲಿ ಮಾಡಲು ಸೂಚಿಸಿರುವ ವಿಚಾರ ಪ್ರಸ್ತಾಪವಾಯಿತು. ಈ ಕುಟುಂಬಗಳಿಗೆ ಬೇರೆಡೆ ವಾಸಿಸುವ ಅವಕಾಶ ಕಲ್ಪಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಡಿಸಿ ಸೂಚಿಸಿದರು.
ಹರಿಹರ ನಗರದಲ್ಲಿ ಶಿಥೀಲವಾದ ಡಿ.ಆರ್.ಎಂ ಶಾಲೆಯ ಕಾಂಪೌಂಡ್ ದುರಸ್ತಿಗೆ 15 ಲಕ್ಷ ರೂ. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಜಗಳೂರು ಬಸ್ ನಿಲ್ದಾಣ, ಎ.ಪಿ.ಎಂ.ಸಿ ಹಾಗೂ ಗೋಶಾಲೆ ಬಳಿ ಗುಡಿಸಲುವಾಸಿ ಎಸ್ಸಿ-ಎಸ್ಟಿ ಜನರಿಗೆ ಸುಲಭ ಶೌಚಗೃಹಗಳನ್ನು ನಿರ್ಮಿಸಿಕೊಡುವಂತೆಯೂ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ, ಪ.ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಬಂದಾಗ ನಿರಾಕರಣೆ ಮಾಡದೆ ಪ್ರವೇಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮದಲ್ಲಿಯು ಸ್ಮಶಾನ ಇದ್ದು ಇದರ ಅಭಿವೃದ್ಧಿ ಮಾಡುವ ಮೂಲಕ ಲ್ಯಾಂಡ್‌ಬೀಟ್ ಮಾಡಲಾಗುವುದು ಎಂದು ಹೇಳಿದರು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ನಾಗರಾಜ, ಡಿಡಿಪಿಐ ಜಿ. ಕೊಟ್ರೇಶ್, ಪರಿಶಿಷ್ಟ ವರ್ಗಗಳ ಅಧಿಕಾರಿ ಬೇಬಿ ಸುನೀತಾ ಹಾಗೂ ಕಿರುವಾಡಿ ಮಂಜುನಾಥ, ಬಾಬಣ್ಣ ಇದ್ದರು.
--