

ದಾವಣಗೆರೆ: ಕೊಳೆಗೇರಿ ನಿವಾಸಿಗಳ ಆಸ್ತಿ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ ಅಗತ್ಯ ಹಕ್ಕುಪತ್ರ ಹಾಗೂ ಇ-ಖಾತೆ ನೀಡಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಒತ್ತಾಯಿಸಿವೆ.
ಕೊಳಚೆ ಪ್ರದೇಶಗಳ ಆಸ್ತಿಗಳ ಸಂಬಂಧ ಸರ್ಕಾರ ಕೇಳುವ ದಾಖಲೆಗಳನ್ನು ಸಲ್ಲಿಸಲು ನಿವಾಸಿಗಳಿಗೆ ಸಾಧ್ಯವಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕದ ಗೌರವಾಧ್ಯಕ್ಷ ಆನಂದಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಬಹುತೇಕ ಮನೆಗಳು ನಿರ್ಮಾಣ ಆಗಿಲ್ಲ. ರಾಜ್ಯದ 1.8 ಲಕ್ಷ ಮನೆಗಳಲ್ಲಿ 60 ಸಾವಿರ ಮನೆಗಳು ಮಾತ್ರ ಪೂರ್ಣಗೊಂಡಿವೆ. 1.2 ಲಕ್ಷ ಮನೆಗಳ ನಿರ್ಮಾಣಕ್ಕೆ ಪ್ರಕ್ರಿಯೆ ಶುರುವಾಗಿಲ್ಲ. ಇದರಿಂದ ನಿರಾಶ್ರಿತರು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಳಚೆಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ಖಾಸಗಿ ಜಾಗದಲ್ಲಿರುವ ಕೊಳಚೆ ಪ್ರದೇಶದ ಜನರಿಗೆ ಸೌಲಭ್ಯ ತಲುಪುತ್ತಿಲ್ಲ ಎಂದು ದೂರಿದರು.
ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಮುಖಂಡರಾದ ಮಂಜುಳಾ, ಬಾಲಪ್ಪ, ಜಂಶಿದಾ ಬಾನು, ಅಕ್ಕಿ ರಾಮಚಂದ್ರ, ಬೀಬಿ ಜಾನ್, ಪರ್ವಿನ್ ಬಾನು ಹಾಜರಿದ್ದರು.
---