ಯುವ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ ಉಸ್ತುವಾರಿ ಎದುರಲ್ಲೇ ಬಣ ಗಲಾಟೆ

1000973296.jpg
Published on

ದಾವಣಗೆರೆ: ದಾವಣಗೆರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಎರಡು ಬಣಗಳ ನಡುವಿನ ಭಿನ್ನಮತ ಸ್ಫೋಟಿಸುವ ಜತೆಗೆ ಬೆಂಬಲಿಗರ ನಡುವಿನ ಜಟಾಪಟಿ ಕೈ-ಕೈಮಿಲಾಯಿಸುವ ಹಂತಕ್ಕೆ ತಲುಪಿತು.

ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಕಾಂಗ್ರೆಸ್ ಯುವ ಘಟಕದ ರಾಜ್ಯಉಸ್ತುವಾರಿ ನಿಗಮ್ ಭಂಡಾರಿ, ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ ಸಮ್ಮುಖದಲ್ಲೇ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಕೊಂಡಜ್ಜಿ ಬೆಂಬಲಿಗರು ವಾದ- ಪ್ರತಿವಾದಕ್ಕೆ ಇಳಿವ ಮೂಲಕ ಯುವ ಕಾಂಗ್ರೆಸ್ ಒಡೆದ ಮನೆ ಎಂಬುದನ್ನು ಸಾಬೀತುಪಡಿಸಿದರು.

ಶಿಷ್ಟಾಚಾರದಂತೆ, ನಿಕಟಪೂರ್ವ ಜಿಲ್ಲಾಧ್ಯಕ್ಷರೂ ಆಗಿದ್ದ ನಿಖಿಲ್ ಕೊಂಡಜ್ಜಿ ಸೇರಿ ಕೆಲ ಪದಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಅವರಿಗೆ ಮಾತನಾಡಲೂ ಅವಕಾಶ ಕೊಡಲಿಲ್ಲ ಎಂಬುದು ಅವರ ಬೆಂಬಲಿರನ್ನು ಕೆಣಕಿತು.

ಇತ್ತ ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ, ಯುವ ಘಟಕದ ಪದಾಧಿಕಾರಿಗಳ ಜತೆಗೆ ಪ್ರತ್ಯೇಕ ಸಭೆ ನಡೆಸುವ ಇರಾದೆ ಪ್ರಕಟಿಸಿದರು. ಆಗ ನಿಖಿಲ್ ಪರ ಬ್ಲಾಕ್ ಸಮಿತಿ ಅಧ್ಯಕ್ಷರೊಬ್ಬರು ಎದ್ದು ನಿಂತು ‘ಇಲ್ಲಿಯೇ ಸಭೆ ನಡೆಸಿದರೆ ಸಮಸ್ಯೆಗಳ ಅರಿವಾಗಲಿದೆ, ನಮಗೂ ಮಾತನಾಡಲು ಅವಕಾಶ ಕೊಡಿ’ ಎಂದರು.

ರಾಜ್ಯಾಧ್ಯಕ್ಷ ಮಂಜುನಾಥ ಇದಕ್ಕೆ ಅವಕಾಶ ಕೊಡಲಿಲ್ಲ. ಅಷ್ಟು ಹೊತ್ತಿಗೆ ವೇದಿಕೆ ಮುಂಭಾಗ ಬಂದ ನಿಖಿಲ್ ಬೆಂಬಲಿಗರ ಜತೆ ಇನ್ನೊಂದು ಬಣದ ಕಾರ್ಯಕರ್ತರೂ ಮಾತಿನ ಚಕಮಕಿ ನಡೆಸಿದರು.

ಒಂದು ಬಣ ‘ಯೂತ್ ಕಾಂಗ್ರೆಸ್‌ಗೆ ಜೈ’ ಎಂದು ಕೂಗಿದರೆ, ಮತ್ತೊಂದು ಬಣ ನಿಖಿಲ್ ಕೊಂಡಜ್ಜಿ ಪರ ಜೈಕಾರ ಕೂಗಿತು. ನೂಕಾಟ, ತಳ್ಳಾಟದ ಜತೆ ಕೈ ಕೈ ಮಿಲಾಯಿಸುವ ಹಂತ ತಲುಪಿತು.

ಎಲ್ಲವನ್ನೂ ಗಮನಿಸುತ್ತಿದ್ದ ರಾಜ್ಯಾಧ್ಯಕ್ಷರು ‘ಗಲಾಟೆಯಲ್ಲಿ ಭಾಗಿಯಾದವರಿಗೆ ನೋಟಿಸ್ ಕೊಡಿ’ ಎಂದು ಸೂಚಿಸಿ ನಂತರ ಬಿಜೆಪಿ ವಿರುದ್ಧ ನಿಗದಿಯಾಗಿದ್ದ ಪ್ರತಿಭಟನೆಗೆ ಹೊರನಡೆದರು.

ಕಾರ್ಯಕ್ರಮ ಆರಂಭದಲ್ಲಿ ಮಾತನಾಡಿದ ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ‘ಬೆಳಗಿನ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತರು ಬೇರೆ ಬೇರೆಯಾಗಿದ್ದನ್ನು ಗಮನಿಸಿದ್ದೇನೆ. ಗುಂಪುಗಾರಿಕೆ ಬೇಡ’ ಎಂದು ಸೂಚ್ಯವಾಗಿ ಹೇಳಿದ್ದರು.

ತಡವಾಗಿ ಹಾಜರಾದ ಯುವ ಘಟಕದ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ‘ನನಗಾಗಲೀ, ನಿಖಿಲ್ ಕೊಂಡಜ್ಜಿ ಅವರಿಗಾಗಲೀ ಆಹ್ವಾನ ಬಂದಿಲ್ಲ, ಜಿಲ್ಲಾಧ್ಯಕ್ಷರು ತಿದ್ದಿಕೊಳ್ಳಬೇಕು. ಭಿನ್ನಾಭಿಪ್ರಾಯ ಕೈಬಿಡಬೇಕು’ ಎಂದು ಹೇಳಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದು, ಕಳೆದ ಫೆಬ್ರವರಿಯಲ್ಲಿ ಫಲಿತಾಂಶ ಘೋಷಣೆಯಾಗಿತ್ತು. ಆದರೆ ನಾಲ್ಕು ತಿಂಗಳ ಬಳಿಕ ನಿಗದಿಯಾಗಿದ್ದ ಪದಗ್ರಹಣದಲ್ಲಿ ಉಭಯ ಬಣಗಳ ಭಿನ್ನಮತ ಬೀದಿಗೆ ಬಂದಿತು.

ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಘಟಕದ ಬಹುತೇಕ ಪದಾಧಿಕಾರಿಗಳು ತಮ್ಮವರು ಎಂಬ ಕಾರಣಕ್ಕೆ ಜಿಲ್ಲಾಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ನಡೆಯುತ್ತಿಲ್ಲ. ನಿಕಟಪೂರ್ವ ಜಿಲ್ಲಾಧ್ಯಕ್ಷರನ್ನು ಮಾತನಾಡದಂತೆ ಉದ್ದೇಶಪೂರ್ವಕವಾಗಿಯೇ ತಡೆಯಲಾಗಿದೆ ಎಂದು ನಿಖಿಲ್ ಕೊಂಡಜ್ಜಿ ಪರ ಕಾರ್ಯಕರ್ತರೊಬ್ಬರು ವಿಜಯವಾಣಿ ಜತೆ ಅಸಮಾಧಾನ ಹೇಳಿಕೊಂಡರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net