

ದಾವಣಗೆರೆ: ಸರ್ವೇ ನಂಬರ್ ಅಳವಡಿಕೆಯಲ್ಲಿ, ದಿಶಾಂಕ್ ಆ್ಯಪ್‌ನಲ್ಲಾದ ತಾಂತ್ರಿಕ ಸಮಸ್ಯೆಯಿಂದಾಗಿ ನಗರದ ಪಿ.ಜೆ.ಬಡಾವಣೆಗೆ ಸಂಬಂಧಿಸಿದ ಪಹಣಿಯಲ್ಲಿ ನೋಂದಣಿಯಾಗಿದ್ದ ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ ಹೆಸರನ್ನು ಕಂದಾಯ ಇಲಾಖೆ ಕೊನೆಗೂ ತಿದ್ದುಪಡಿ ಮಾಡಿದೆ.
ಈ ಬಡಾವಣೆಯ 4 ಎಕರೆ 13 ಗುಂಟೆ ಜಾಗ ಭೂದಾಖಲೆಗಳಲ್ಲಿ ಈ ಹಿಂದೆ ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ ಹೆಸರು ನೋಂದಣಿಯಾಗಿತ್ತು. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಪಹಣಿಯ ದಾಖಲೆಯಲ್ಲಿ ಸರ್ಕಾರಿ ಖರಾಬು ಎಂಬುದಾಗಿ ನಮೂದಾಗಿದ್ದು, ಬಡಾವಣೆ ನಿವಾಸಿಗಳಲ್ಲಿದ್ದ ಆತಂಕ ದೂರಾಗಿದೆ.
ಇಲ್ಲಿನ ಗುಂಡಿ ಮಹಾದೇವಪ್ಪ ಅವರ ಹಳೆಯ ಮನೆ, ಎ.ವಿ.ಕೆ ಕಾಲೇಜು, ಚೇತನಾ ಹೋಟೆಲ್ ರಸ್ತೆ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಶ್ರೀರಾಮ ಮಂದಿರ ಸೇರಿದಂತೆ ಹಲವು ಆಸ್ತಿ, ಬಡಾವಣೆ ದಾಖಲೆಯಲ್ಲಿ ವಕ್ಫ್ ಆಸ್ತಿಯಾಗಿ ನಮೂದಾಗಿದ್ದವು. ಉಪವಿಭಾಗಾಧಿಕಾರಿ ನ್ಯಾಯಾಲಯದ ಆದೇಶದಂತೆ ದಾವಣಗೆರೆ ತಹಸೀಲ್ದಾರ್ 2015ರ ಮಾರ್ಚ್ 10ರಂದು ಖಾತೆ ತಿದ್ದುಪಡಿ ಮಾಡಿದ್ದರು. ತಾಂತ್ರಿಕ ಸಮಸ್ಯೆಯಿಂದ ಪಹಣಿಯಲ್ಲಾದ ದೋಷವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸರಿಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಬಡಾವಣೆಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಎಚ್ಚೆತ್ತ ಕಂದಾಯ ಅಧಿಕಾರಿಗಳು ಸ್ಥಳೀಯರೊಂದಿಗೆ ಸಮಾಲೋಚನಾ ಸಭೆ ನಡೆಸಿ, ನೀಡಿದ್ದ ಭರವಸೆಯಂತೆ ಪಹಣಿ ತಿದ್ದುಪಡಿಯಾಗಿದೆ.
ಬ್ರಿಟಿಷರ ಸರ್ವೇ(1880ನೇ ಇಸವಿ) ಕಾಲದಿಂದಲೂ 48ನೇ ಸರ್ವೆ ನಂಬರ್‌ನ 52 ಎಕರೆ ಜಾಗ ಸರ್ಕಾರಿ ಖರಾಬು ಎಂದಿತ್ತು ದಾವಣಗೆರೆ ಗ್ರಾಮದ ಕಸಬಾ ಹೋಬಳಿಯ 48 ಹಾಗೂ 53ನೇ ಸರ್ವೇ ನಂಬರ್‌ಗಳ ವ್ಯಾಪ್ತಿಯಲ್ಲಿದ್ದ 70 ಎಕರೆ ಪ್ರದೇಶವನ್ನು ಬಡಾವಣೆ ಅಭಿವೃದ್ಧಿಗಾಗಿ 1955ರಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು.
ಆಗ ಸರ್ವೆ ನಂಬರ್ 53ರಲ್ಲಿದ್ದ 18 ಎಕರೆಯನ್ನು ಸರ್ವೆ ನಂಬರ್ 48ರಲ್ಲಿ ವಿಲೀನಗೊಳಿಸಲಾಗಿತ್ತು. 53ನೇ ಸರ್ವೇ ನಂಬರ್ ಅಸ್ತಿತ್ವ ಕಳೆದುಕೊಂಡಿತು. ಸರ್ವೇ ನಂಬರ್‌ಗಳ ಕ್ರಮಾಂಕ ಉಳಿಸಲು, ಗ್ರಾಮದ ಕೊನೆಯ ಸರ್ವೆ ನಂಬರ್ (162)ಗೆ ಸೇರಿದ್ದ 4 ಎಕರೆ 13 ಗುಂಟೆ ಭೂಮಿಯನ್ನು 53 ಸರ್ವೇ ನಂಬರ್‌ನಲ್ಲಿ ಸೇರ್ಪಡೆ ಮಾಡಿ ತಿದ್ದುಪಡಿ ಮಾಡಲಾಗಿತ್ತು.
ನಂತರ 162ನೇ ಸರ್ವೇ ನಂಬರ್ ತೆಗೆದು ಅದಕ್ಕೆ 53 ಸರ್ವೇ ನಂಬರ್ ಎಂಬುದಾಗಿ ಮರು ಸೇರ್ಪಡೆ ಮಾಡಲಾಯಿತು. ಆಗ ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ ಆಸ್ತಿ ಸರ್ವೆ ನಂಬರ್ 53 ಎಂಬುದಾಗಿತ್ತು. 2015ರಲ್ಲಿ ಭೂದಾಖಲೆ ತಿದ್ದುಪಡಿ ವೇಳೆ ತಾಂತ್ರಿಕ ದೋಷದಿಂದ ಬಡಾವಣೆ ಆಸ್ತಿ ವಕ್ಫ್ ಹೆಸರಲ್ಲಿ ನಮೂದಾಗಿತ್ತು ಎನ್ನಲಾಗಿದೆ.
ದಿಶಾಂಕ್ ಆ್ಯಪ್‌ನಲ್ಲಿ ಉಳಿದಿರುವ ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ ಹೆಸರನ್ನು ತೆಗೆದುಹಾಕಿ ನಕ್ಷೆ ತಿದ್ದುಪಡಿ ಮಾಡಿ ದಾಖಲೆ ಸರಿಪಡಿಸುವಂತೆ ಭೂದಾಖಲೆಗಳ ಆಯುಕ್ತರಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ.
-----
ದಾಖಲೆಗಳಲ್ಲಿ ಇಂದಿಗೂ 53ನೇ ಸರ್ವೇ ನಂಬರ್‌ನಲ್ಲಿ ಖಬರಸ್ತಾನ್ ಎಂಬುದಿದೆ. ಆದರೆ ದಿಶಾಂಕ್ ಆ್ಯಪ್ ಅಪ್‌ಡೇಟ್ ಆಗದ್ದರಿಂದ 48ನೇ ಸರ್ವೇ ನಂಬರ್‌ನ ಸ್ಥಳವನ್ನು ಆ್ಯಪ್‌ನಲ್ಲಿ 53 ಎಂಬುದಾಗಿ ತೋರಿಸುತ್ತಿತ್ತು. ಇದು ಜನರಲ್ಲಿ ಗೊಂದಲ ಮೂಡಿಸಿದ್ದು ಸಹಜ. ಇನ್ನು 7ರಿಂದ 10 ದಿನದಲ್ಲಿ ಇದು ದೂರವಾಗಲಿದೆ.
ಡಾ.ಎಂ.ಬಿ.ಅಶ್ವಥ್
ದಾವಣಗೆರೆ ತಹಸೀಲ್ದಾರ್.