ರೈಲ್ವೆ ಸೇತುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ     ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ಸೂಚನೆ

1000183770.jpg
Published on

ದಾವಣಗೆರೆ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ರೈಲ್ವೆಸೇತುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ರೈಲ್ವೆ ಅಧಿಕಾರಿಗಳು, ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ಡಿಸಿ ಡಾ.ಎಂ.ವಿ.ವೆಂಕಟೇಶ್, ರೈಲ್ವೆ ಅಧಿಕಾರಿಗಳು, ಇಂಜಿನಿಯರ್‌ಗಳೊಂದಿಗೆ ಚರ್ಚೆ ವೇಳೆ ಈ ಬಗ್ಗೆ ತಿಳಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಈ ಹೊಸ ರೈಲು ಮಾರ್ಗದಲ್ಲಿ ಬುಳ್ಳಾಪುರ, ಆನಗೋಡು, ನೀರ್ಥಡಿ, ಚಿನ್ನಸಮುದ್ರ, ಹೆಬ್ಬಾಳು ಗ್ರಾಮಗಳಿವೆ. ಅಲ್ಲದೇ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳಿವೆ. ಭವಿಷ್ಯದಲ್ಲಿನ ಜನಸಂಖ್ಯೆ ಮತ್ತು ವಾಹನ ಸಂಖ್ಯೆಗಳ ಪ್ರಮಾಣ ಹೆಚ್ಚಳದ ದೃಷ್ಟಿಕೋನದಿಂದ ಮುಂದಿನ 50 ವರ್ಷಗಳ ಕಾಲ ಬಾಳಿಕೆ ಬರುವಂತೆ ವೈಜ್ಞಾನಿಕವಾಗಿ ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಿಸಬೇಕೆಂದು ಹೇಳಿದರು.
ಆನಗೋಡು-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಲಾರಿಗಳು ಸಂಚರಿಸುತ್ತವೆ, ಅಲ್ಲಿ 5 ಮೀ. ಬದಲಾಗಿ 7 ಮೀ. ಎತ್ತರದ ಸೇತುವೆ ನಿರ್ಮಿಸಬೇಕು. ಇತ್ತೀಚೆಗೆ ಅವೈಜ್ಞಾನಿಕ ಸೇತುವೆಗಳನ್ನು ಕಿತ್ತು ಪುನಃ ನಿರ್ಮಿಸಿ ಕೋಟ್ಯಂತರ ರೂ. ವ್ಯರ್ಥ ಮಾಡಿದ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಹೀಗಾಗದಂತೆ ಶಾಶ್ವತ ಕಾಮಗಾರಿಗೆ ಎಚ್ಚರ ವಹಿಸಬೇಕು. ಸಾರ್ವಜನಿಕರ ಹಣ ಪೋಲಾಗಲು, ಅಧಿಕಾರಿಗಳಿಗೆ ಹಿಡಿಶಾಪ ಹಾಕಲು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.
ಈ ರೈಲ್ವೆ ಮಾರ್ಗದಲ್ಲಿ ಜಮೀನುಗಳು ಹಾಗೂ ಸಂಪರ್ಕ ರಸ್ತೆಗಳಿವೆ. ರೈತರು ಜಮೀನುಗಳಿಗೆ ಹೋಗಿ ಬರಲು ತೊಂದರೆ ಆಗದಂತೆ ಸೇತುವೆಗಳನ್ನು ನಿರ್ಮಿಸಬೇಕು. ಇಲ್ಲಿ ಸೇತುವೆ ನಿರ್ಮಿಸಲು ಕ್ರಿಯಾಯೋಜನೆ ಇರದಿದ್ದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಅಲ್ಲಿ ಸೇತುವೆ ನಿರ್ಮಾಣಕ್ಕೆ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಭೂಸ್ವಾಧೀನ ಸಮಸ್ಯೆಯಿದ್ದರೆ ಜಿಲ್ಲಾಧಿಕಾರಿಗಳು ತ್ವರಿತವಾಗಿ ಬಗೆಹರಿಸಬೇಕೆಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ರೈಲ್ವೆ ಮಾರ್ಗದ ಕಾಮಗಾರಿ ಮಂದಗತಿಯಲ್ಲಿದೆ ಎಂಬ ಆರೋಪವಿದೆ. ದಾವಣಗೆರೆ ಜಿಲ್ಲೆಯಲ್ಲಿ ತ್ವರಿತವಾಗಿ ಕೆಲಸಗಳು ನಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ರೈಲ್ವೆ ಅಧಿಕಾರಿಗಳು ಇದ್ದರು.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net