ಜ್ಞಾನ ಸಂಪಾದನೆಗೆ ಒತ್ತು ನೀಡಿದ ಶರಣರು

1000306969_20240810234844129.jpg
Published on

ದಾವಣಗೆರೆ: ಬಸವಾದಿ ಶರಣರು ಜ್ಞಾನದ ಮೂಲಕ ಜನಸಾಮಾನ್ಯರನ್ನು ಬಂಧನದಿಂದ ಬಿಡುಗಡೆಗೊಳಿಸಿದರು. ಜನರ ಬದುಕನ್ನು ಹಸನಾಗಿಸಿದರು ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ನಗರದ ವಿರಕ್ತಮಠದಲ್ಲಿ ಹಮ್ಮಿಕೊಂಡಿರುವ ಕಲ್ಯಾಣದಿಂದ ಉಳವಿಯಡೆಗೆ 114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
 ಶರಣರು ಅನುಭವ ಮಂಟಪದಲ್ಲಿ ವಚನಗಳ ಚಿಂತನ-ಮಂಥನದ ಮೂಲಕ ಆಧ್ಯಾತ್ಮಿಕ ಸಂಪತ್ತನ್ನು ನೀಡಿದರು. ಕಾಯ ವಿಕಾರವು ಹಲವಾರು ಮಾನಸಿಕ ಮತ್ತು ದೈಹಿಕ ರೋಗಗಳಿಗೆ ಕಾರಣವಾಗುತ್ತದೆ. ಇಂತಹ ರೋಗ ಗುಣಪಡಿಸಲು ಬಸವಣ್ಣನವರು ಎಲ್ಲ ಕಾಯಕದವರಿಗೂ ಇಷ್ಟ ಲಿಂಗವನ್ನು ಅನುಗ್ರಹಿಸಿ ಮನಸ್ಸನ್ನು ನಿಗ್ರಹಿಸುವಂತೆ ಮಾಡಿ ಸಾಮಾನ್ಯನನ್ನು ಶರಣರನ್ನಾಗಿ ಮಾಡಿದರು ಎಂದರು.
ವಚನಗಳಲ್ಲಿ ಹುದುಗಿರುವ ಸದ್ವಿಚಾರಗಳನ್ನು ಅಳವಡಿಸಿಕೊಳ್ಳಲು ಜಂಗಮ ಎಂಬ ಮಾಧ್ಯಮ ಹುಟ್ಟಿಕೊಂಡಿತು. ಜಂಗಮರು ಮಾಧ್ಯಮದ ರೀತಿಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದರು. ಜಂಗಮರ ಸೇವೆ ಹಾಗೂ ಶ್ರಮದಿಂದ ಇಂದು ನಾವು ನಮ್ಮ ಜೀವನ ಸುಧಾರಿಸಿಕೊಳ್ಳಲು ಕಾರಣವಾಯಿತು ಎಂದು ಹೇಳಿದರು.
 ಶರಣರು ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ಕೊಟ್ಟರು. ಜ್ಞಾನವಿಲ್ಲದೆ ಮೋಕ್ಷವಿಲ್ಲ ಎಂಬುದನ್ನು ಪ್ರತಿಪಾದಿಸಿದರು. ಮನಸ್ಸು ಎಲ್ಲ ದುಃಖಗಳಿಗೂ ಕಾರಣೀಭೂತವಾಗಿದೆ. ಆದುದರಿಂದ ಇಂತಹ ಮನಸ್ಸನ್ನು ಯೋಗ ಸಾಧನೆ, ಧ್ಯಾನ, ಪ್ರಾರ್ಥನೆ ಹಾಗೂ ಭಜನೆಯ ಮೂಲಕ ಸಮಾಧಾನಪಡಿಸಿ ಎಲ್ಲರಿಗೂ ಆಧ್ಯಾತ್ಮ ವಿದ್ಯೆ ಹಂಚಿದರು. ವೈಯಕ್ತಿಕ ಕಲ್ಯಾಣದೊಂದಿಗೆ ಸಾಮೂಹಿಕ ಕಲ್ಯಾಣ ಸಾಧಿಸಿದರು ಎಂದು ವಿವರಿಸಿದರು.
ಇದರಿಂದ ಕಲ್ಯಾಣದಲ್ಲಿ ಕಾಯಕವೇ ಕೈಲಾಸ ಎಂಬ ತತ್ವ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಕಾಯಕವಿಲ್ಲದೆ ಯಾವ ಮನುಷ್ಯನು ಪ್ರಸಾದ ಮಾಡುವಂತಹ ಸ್ಥಿತಿ ಇರಬಾರದು ಪ್ರತಿಯೊಬ್ಬ ಮನುಷ್ಯನು ಕಾಯಕದ ಮೂಲಕವಾಗಿಯೇ ಜೀವಿಸಬೇಕು. ಪರರ ದ್ರವ್ಯವನ್ನು ವಿಷವೆಂದು ಪರಿಗಣಿಸಿ ಸ್ವಂತ ದುಡಿಮೆಯಿಂದ ದುಡಿದು ಜಂಗಮ ದಾಸೋಹವನ್ನು ಮಾಡಬೇಕು. ಇದರಿಂದ ಮಾನವ ಜೀವನ ಕಲ್ಯಾಣವಾಗುತ್ತದೆ. ಜೀವನ ಹಸನಾಗುತ್ತದೆ, ಸಮಾಜ ಶುದ್ಧವಾಗುತ್ತದೆ. ಆದುದರಿಂದ ಕಾಯಕ ದಾಸೋಹದ ತತ್ವ ಬಹಳ ಶ್ರೇಷ್ಠವಾದದ್ದು ಎಂದು ಬಸವಾದಿ ಪ್ರಮಥರು 12ನೇ ಶತಮಾನದಲ್ಲಿ ಸಾರಿದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net