14ರಿಂದ ಮಧುಮೇಹ ಮೇಳ ಎಸ್ಸೆಸ್ ಕೇರ್ ಟ್ರಸ್ಟ್‌ ಆಯೋಜನೆ

1000493753.jpg
Published on

ದಾವಣಗೆರೆ: ಎಸ್‌ಎಸ್ ಕೇರ್ ಟ್ರಸ್ಟ್‌ನಿಂದ ನಮ್ಮ ನಡೆ ಆರೋಗ್ಯದೆಡೆ ಯೋಜನೆಯಡಿ ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ಬಾಪೂಜಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಹಾಗೂ ಎಸ್ಸೆಸ್ ಆಸ್ಪತ್ರೆಯ ಆಡಳಿತ ವಿಭಾಗ( ಫಾರ್ಮಸಿ ಎದುರು) ನ. 14ರಿಂದ 20ರ ವರೆಗೆ ಮಧುಮೇಹ ಮತ್ತು ಸ್ವಾಸ್ಥೃ ಮೇಳ ನಡೆಯಲಿದೆ.
ಜೆಜೆಎಂ ವೈದ್ಯಕೀಯ ಕಾಲೇಜು, ಬಾಪೂಜಿ ಆಸ್ಪತ್ರೆ ಹಾಗೂ ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಎಸ್‌ಎಸ್ ಹೈಟೆಕ್ ಆಸ್ಪತ್ರೆ ಇವರ ಸಹಯೋಗದಲ್ಲಿ ಈ ಮೇಳ ನಡೆಯಲಿದೆ ಎಂದು ಟ್ರಸ್ಟ್‌ನ ಸದಸ್ಯರಾದ ಡಾ. ಮೂಗನಗೌಡ ಪಾಟೀಲ್ ಹಾಗೂ ಡಾ. ಲತಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಾಮಾನ್ಯ ಜನರಿಗೆ ಆರ್‌ಬಿಎಸ್, ಬಿಪಿ ಪರೀಕ್ಷೆ ನಡೆಯಲಿದೆ. ಉಳಿದಂತೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಈ ಮೇಳದಲ್ಲಿ ಎಚ್‌ಬಿಸಿಎ1 ಸಿ, ಆರ್‌ಎಫ್‌ಟಿ, ಪಿಪಿಬಿಎಸ್, ಕಣ್ಣಿನ ನರ ತಪಾಸಣೆ, ಇಸಿಜಿ, ಪಿಜಿಶಿಯನ್, ನರರೋಗ ಮತ್ತು ಕಿಡ್ನಿ ರೋಗ ವೈದ್ಯರೊಂದಿಗೆ ಸಮಾಲೋಚನೆ, ಮಧುಮೇಹ ಚಿಕಿತ್ಸೆ ಕುರಿತು ಸಮಾಲೋಚನೆ ನಡೆಯಲಿದೆ.
ನಿರಂತರ ಗ್ಲೋಕೋಸ್ ಮಾನಿಟರಿಂಗ್ ಪ್ರದರ್ಶನ, ಮಧುಮೇಹ ಕುರಿತು ಶಿಕ್ಷಣ-ಆಹಾರ ಪ್ರದರ್ಶನ, ಮಧುಮೇಹಿಗಳಲ್ಲಿ ಫಾದದ ರಕ್ಷಣೆ ಹಾಗೂ ಪಾದರಕ್ಷೆಗಳ ಪ್ರದರ್ಶನ, ಇನ್ಸುಲಿನ್ ಪೆನ್ ಬಳಕೆ ಕುರಿತು ತಿಳಿವಳಿಕೆ ನಿಡಲಾಗುವುದು. ಬೆಳಗ್ಗೆ 9 ಗಂಟೆಗೆ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನಿಂದ ಬಾಪೂಜಿ ಆಸ್ಪತ್ರೆವರೆಗೆ ವಾಕಥಾನ್ ನಡೆಯಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ನಂತರ ಬಾಪೂಜಿ ಒಪಿಡಿಯಲ್ಲಿ ಮೇಳದ ಉದ್ಘಾಟನೆ ನಡೆಯಲಿದೆ ಎಂದರು.
ಭಾರತದಲ್ಲಿ ಸಕ್ಕರೆ ಕಾಯಿಲೆ ಹೆಚ್ಚುತ್ತಿದೆ. 2025ರ ವೇಳೆಗೆ ಐವರಲ್ಲಿ ಒಬ್ಬರಿಗೆ ಇದು ಕಾಣಿಸಿಕೊಳ್ಳುವ ಅಂದಾಜಿದೆ. ಹೀಗಾಗಿ ಮಧುಮೇಹದ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಹಾರ ಕ್ರಮದ ತಿಳಿವಳಿಕೆ ಹಾಗೂ ದೈಹಿಕ ವ್ಯಾಯಾಮದ ಕೊರತೆ, ನಿತ್ಯ ಮೊಬೈಲ್, ಕಂಪ್ಯೂಟರ್ ಬಳಕೆ ಇತ್ಯಾದಿ ಕಾರಣಕ್ಕೆ ಇದು ಹೆಚ್ಚುತ್ತಿದೆ. ಇತ್ತೀಚೆಗೆ ಮಕ್ಕಳೂ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಜನರಲ್ಲಿ ಇದರ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಹೇಳಿದರು.
ಮೇಳದಲ್ಲಿ ಒಟ್ಟು 8 ಮಳಿಗೆಗಳು ಇರಲಿವೆ. ಮಧುಮೇಹವನ್ನು ಆರಂಭದಲ್ಲೇ ನಿಯಂತ್ರಣ ಮಾಡಬೇಕಿದೆ. ಇಲ್ಲವಾದಲ್ಲಿ ಕಣ್ಣು, ಹೃದಯ ಸಮಸ್ಯೆಗೆ ಈಡಾಗಬೇಕಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯೆ ಡಾ. ಶಾಂತಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net