ಅಂಧರಿಗೆ ಜ್ಞಾನದ ಬೆಳಕಿತ್ತ ಪುಟ್ಟರಾಜರು   ಕಿರುವಾಡಿ ಗಿರಿಜಮ್ಮ ಹೇಳಿಕೆ   ಭಕ್ತರ ಸಮಾವೇಶ

1000127529.jpg
Published on

ದಾವಣಗೆರೆ: ಕಣ್ಣಿಲ್ಲದವರಿಗೆ ಆಶ್ರಯ ನೀಡುವ ಮೂಲಕ ಜ್ಞಾನದ ಬೆಳಕು ನೀಡಿದ ಮಹಾಚೇತನ ಪಂ. ಪುಟ್ಟರಾಜ ಗವಾಯಿಗಳು ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ ಹೇಳಿದರು.
ಗದಗಿನ ಡಾ.ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಂ. ಪುಟ್ಟರಾಜ ಗುರುವರ್ಯರ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಮಾತನಾಡಿದರು.
 ಸಾವಿರಾರು ಜನ ಅಂಧರು ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಸಂಗೀತ ಕಲಿತು ಜೀವನ ಮಾರ್ಗ ಕಂಡುಕೊಂಡಿದ್ದಾರೆ. ಇಲ್ಲದಿದ್ದರೆ ಬಹಳಷ್ಟು ಜನರು ಪ್ರಾಪಂಚಿಕ ಜ್ಞಾನದಿಂದ ವಂಚಿತರಾಗಿ ಕತ್ತಲೆಯಲ್ಲಿರಬೇಕಾಗಿತ್ತು ಎಂದು ತಿಳಿಸಿದರು.
ನಾಡಿನಲ್ಲಿ ಶರಣರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ವಚನ ಹಾಗೂ ಶರಣ ಸಾಹಿತ್ಯವನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಯುವಜನರಿಗೆ ನಮ್ಮ ಸಂಸ್ಕೃತಿ ಪರಿಚಯಿಸಬೇಕಿದೆ ಎಂದರು.
ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಪುಟ್ಟರಾಜ ಸೇವಾ ಸಮಿತಿ ಮೂಲಕ ಗುರುವರ್ಯರ ಜೀವನ ಮತ್ತು ಸಾಧನೆಯನ್ನು ರಾಜ್ಯಾದ್ಯಂತ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ವರ್ಷ ವಿವಿಧ ಜಿಲ್ಲೆಗಳಲ್ಲಿ ಪುಟ್ಟರಾಜ ಗವಾಯಿಗಳ ಸಾವಿರದ ಸಾಹಿತ್ಯ ಅಭಿಯಾನ ಕೈಗೊಳ್ಳಲಾಗಿದ್ದು, ಸಾವಿರ ಮನೆಗಳಿಗೆ ಸಾಹಿತ್ಯ ಕೃತಿಗಳನ್ನು ತಲುಪಿಸಲಾಗಿದೆ. ವಿವಿಧ  ಜಿಲ್ಲೆ ಮತ್ತು ತಾಲೂಕು ಸಮಿತಿಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವಾ ಕಾರ್ಯ ಕೈಗೊಂಡಿವೆ ಎಂದರು.
ನಗರದಲ್ಲಿ ಕಲೆಗೆ ಕಣ್ಣಿತ್ತ ಪೂಜ್ಯರು ಎಂಬ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಂಡಿದ್ದು, ಇದರ ಕವನ ಸಂಕಲನ ಹೊರತರುವ ಸಂಕಲ್ಪ ಮಾಡಲಾಗಿದೆ. ಆಯ್ದ ಐವರು ಕವಿಗಳಿಗೆ ಬಹುಮಾನ ನೀಡಲು ಯೋಜಿಸಲಾಗಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, ದಾವಣಗೆರೆಯಲ್ಲಿ ಪಂ. ಪುಟ್ಟರಾಜ ಗವಾಯಿಗಳು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದರು. ಅವರ ಸ್ಮರಣೆಯ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಆಶಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಗೌರವಾಧ್ಯಕ್ಷ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಹೂವಿನ ಹಡಗಲಿಯ ನಿವೃತ್ತ ಪ್ರಾಧ್ಯಾಪಕ ಎಂಪಿಎಂ ಕೊಟ್ರಯ್ಯ ಇತರರು ಇದ್ದರು. ಇದೇ ಸಂದರ್ಭದಲ್ಲಿ ಶ್ರೀ ವೀರೇಶ್ವರ ಪುಣಾಶ್ರಮ ಕಾರ್ಯದರ್ಶಿ ಡಾ.ಕರಿಬಸಪ್ಪ ಜಾಲಿಮರದ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net