ಡೆಂಘೆ ನಿಗಾ ವಹಿಸಲು ಸಚಿವರ ಸೂಚನೆ

1000225709.jpg
Published on

ದಾವಣಗೆರೆ: ಜಿಲ್ಲೆಯಲ್ಲಿ ಡೆಂಘೆ ಜ್ವರ ಹೆಚ್ಚಳ ಆಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಸ್ಥಳೀಯ ಸಂಸ್ಥೆಗಳೊಂದಿಗೆ ಆರೋಗ್ಯ ಇಲಾಖೆ ಸಹಭಾಗಿತ್ವ ವಹಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಿ ಎಂದು ತಿಳಿಸಿದರು.
ಡೆಂಘೆ ಜ್ವರದ ತೀವ್ರ ಸ್ವರೂಪವನ್ನು ಡೆಂಘೆ ಹೆಮರಾಜಿಕ್ ಜ್ವರ ಎಂದೂ ಕರೆಯುತ್ತಾರೆ. ಇದು ಗಂಭೀರ ರಕ್ತಸ್ರಾವ, ರಕ್ತದೊತ್ತಡದಲ್ಲಿ ಹಠಾತ್ ಕುಸಿತ (ಆಘಾತ) ಮತ್ತು ಸಾವಿಗೆ ಕಾರಣವಾಗಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಜಾಗ್ರತೆ ವಹಿಸಬೇಕು. ಜನರಲ್ಲಿ ಜಾಗೃತಿ ಮುಡಿಸಬೇಕು ಎಂದರು.
ಸಂಶೋಧಕರು ಡೆಂಘೆ ಜ್ವರ ಲಸಿಕೆಗಳ ಸಂಬಂಧ ಕೆಲಸ ಮಾಡುತ್ತಿದ್ದು, ಲಸಿಕೆ ಬರುವವರೆಗೂ ಸಧ್ಯಕ್ಕೆ, ಡೆಂಘೆ ಜ್ವರ ಸಾಮಾನ್ಯವಾಗಿರುವ ಪ್ರದೇಶಗಳಲ್ಲಿ, ಸೊಳ್ಳೆಗಳು ಕಚ್ಚುವುದನ್ನು ತಪ್ಪಿಸುವುದು ಮತ್ತು ಸೊಳ್ಳೆಗಳ ಶಮನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳು ಗಮನ ಹರಿಸಬೇಕೆಂದರು.
ದಾವಣಗೆರೆ ಡಿಎಚ್‌ಒ ಡಾ. ಷಣ್ಮುಖಪ್ಪ ಹಾಗೂ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ರೇಣುಕಾಪ್ರಸಾದ್ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net