

ದಾವಣಗೆರೆ: ರಾಜ್ಯವ್ಯಾಪಿಡೆಂಘೆ ಜ್ವರ ವ್ಯಾಪಕವಾಗಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಾಯಕೊಂಡ ಕ್ಷೇತ್ರದಲ್ಲಿ ಡೆಂಘೆ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷಿಸುವ ವೈದ್ಯರು, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ದಿಢೀರ್ ಸಭೆ ನಡೆಸಿದ ಶಾಸಕರು, ಮಾಯಕೊಂಡ ಕ್ಷೇತ್ರದ ಎಲ್ಲಾ ಪಿಎಚ್‌ಸಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆಡೆಂಘೆ ಸೋಂಕು ತಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಜ್ವರ ಬಾಧಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.
ಡೆಂಘೆ ಜ್ವರದ ಸೋಂಕಿತ ರೋಗಿಯ ಸ್ಥಿತಿ ಗಂಭೀರವಾಗಿದ್ದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಪಿಎಚ್‌ಸಿ ಕೇಂದ್ರಗಳ ಲ್ಯಾಬ್‌ಗಳಲ್ಲಿ ರಕ್ತದ ಮಾದರಿ ಸಂಗ್ರಹಿಸಿ, ಡೆಂಘೆ ಅಥವಾ ಸಾಮಾನ್ಯ ಜ್ವರವೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
ಶಂಕಿತ ಡೆಂಘೆ ಜ್ವರವಿದ್ದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು. ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದೆ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು.
ಕೆಲವು ಪಿಎಚ್‌ಸಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧ ದಾಸ್ತಾನಿದೆ, ಕೆಲವೆಡೆ ಕೊರತೆ ಇದೆ. ಈ ರೀತಿ ಆಗಬಾರದು. ವೈದ್ಯರು ಹೊರಗಡೆ ಔಷಧ ತರಲು ಚೀಟಿ ಬರೆದುಕೊಡುತ್ತಿರುವ ಬಗ್ಗೆ ದೂರುಗಳಿವೆ. ತಾಲೂಕು ವೈದ್ಯಾಧಿಕಾರಿ ಮತ್ತು ಡಿಎಚ್‌ಒ ಪಿಎಚ್‌ಸಿಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ, ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.
ಕೆಲವು ಗ್ರಾಮಗಳ ಕೋಳಿ ಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಿ, ಗ್ರಾಮಸ್ಥರಲ್ಲಿ ವಿವಿಧ ರೋಗಗಳು ಕಾಡುತ್ತಿವೆ. ಕೋಳಿ ಫಾರಂ ಮಾಲೀಕರಿಗೆ ಸ್ವಚ್ಛತೆ ಬಗ್ಗೆ ನಿಗಾವಹಿಸಲು ಸೂಚನೆ ನೀಡಬೇಕು. ಪಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಇದ್ದರೆ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿವ ನೀರಿನ ಘಟಕಗಳಲ್ಲಿ ಸ್ವಚ್ಛತೆ ಇಲ್ಲ. ಸಂಬಂಧಪಟ್ಟವರಿಗೆ ಶುಚಿತ್ವಕ್ಕೆ ಸೂಚನೆ ನೀಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಪಟ್ಟೇಗ, ಟಿಎಚ್‌ಒ ಕಚೇರಿ ಮೇಲ್ವಿಚಾರಕ ಎಚ್.ಉಮಾಪತಿ, ಡಾ.ಮಹೇಶ್, ಡಾ.ಮಂಜುನಾಥ್, ಡಾ.ರುದ್ರೇಶ್, ಡಾ.ಹೇಮಂತ್‌ಕುಮಾರ್, ಡಾ.ಮಂಜುನಾಥ ಆರ್.ಜಿ.ಹಳ್ಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟಾಚಲ ಕುಮಾರ್, ಕಾರ್ಯಕ್ರಮ ವ್ಯವಸ್ಥಾಪಕ ರವಿ ಇತರರಿದ್ದರು. ಸಭೆ ಬಳಿಕ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಡೆಂಘೆ ಸೋಂಕಿತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸಮಯ ಪಾಲಿಸದಿದ್ರೆ ಸರಿ ಇರಲ್ಲ
ಪಿಎಚ್‌ಸಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಕೆಲವು ಅವ್ಯವಸ್ಥೆ ಕಂಡುಬಂದಿವೆ. ವೈದ್ಯರು, ಲ್ಯಾಬ್ ಟೆಕ್ನೀಷಿಯನ್, ಶುಶ್ರೂಷಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಧ್ಯಾಹ್ನಕ್ಕೇ ಮನೆಗೆ ಹೋಗುತ್ತಿರುವ ಬಗ್ಗೆ ಸಾರ್ವಜನಿಕರ ದೂರುಗಳಿವೆ. ಯಾವುದೇ ಕಾರಣಕ್ಕೂ ಜನರ ಜೀವದ ಜತೆ ಚೆಲ್ಲಾಟ ಆಡಲು ಬಿಡುವುದಿಲ್ಲ. ಸಮಯ ಪಾಲಿಸದಿದ್ದರೆ ಸರಿ ಇರಲ್ಲ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಸಿದರು.
----