ಭತ್ತ ನಾಟಿಗೆ ನೀರು ಹರಿಸಿ  ಭದ್ರಾ  ಅಚ್ಚುಕಟ್ಟು ರೈತರ ಪಟ್ಟು

1000254672.jpg
Published on

ದಾವಣಗೆರೆ: ಮುಂಗಾರು ಹಂಗಾಮಿನ ಭತ್ತದ ನಾಟಿಗೆ ಭದ್ರಾ ಜಲಾಶಯದಿಂದ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಹಾಗೂ ಗಿಡ, ಗಂಟಿ  ತೆರವುಗೊಳಿಸಿ ನಾಲೆಗಳನ್ನು ದುರಸ್ತಿಪಡಿಸಬೇಕು ರೈತರು ಸರ್ಕಾರವನ್ನು ಒತ್ತಾಯಿಸಿದರು.
ಭಾರತೀಯ ರೈತ ಒಕ್ಕೂಟದಿಂದ ನಗರದ ಶ್ರೀ ರೇಣುಕ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ಮಾತನಾಡಿದ ಮುಖಂಡರು, ನಂತರ ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ್ ಮಾತನಾಡಿ, ಭದ್ರಾ ಡ್ಯಾಂ ನೀರಿನಮಟ್ಟ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಭರ್ತಿಯಾಗುವ ಹಂತ ತಲುಪಿದೆ. ನಾಲೆಗಳಿಗೆ ನೀರು ಹರಿಸುವ ಬಗ್ಗೆ ಸರ್ಕಾರ ತ್ವರಿತ ತೀರ್ಮಾನ ಕೈಗೊಳ್ಳಬೇಕು. ತಡವಾದರೆ ನವೆಂಬರ್‌ನಲ್ಲಿ ಮೂಡು ಗಾಳಿಗೆ ಸಿಲುಕಿ ಭತ್ತದ ಬೆಳೆ ಜೊಳ್ಳಾಗುತ್ತದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯು ಭದ್ರಾ ಅಚ್ಚುಕಟ್ಟು ಪ್ರದೇಶದ ಶೇ.75 ರಷ್ಟು ಭಾಗ ಒಳಗೊಂಡಿದ್ದು, ದಾವಣಗೆರೆ ಭಾಗದವರೇ ಕಾಡಾ ಸಮಿತಿ ಅಧ್ಯಕ್ಷರಾಗಬೇಕು ಹಾಗೂ ಇಲ್ಲಿಯೇ ಕಾಡಾ ಸಮಿತಿ ಸಭೆ ಕರೆಯಬೇಕು. ಹಾಗಾದಾಗ ಮಾತ್ರ ಜಿಲ್ಲೆಯ ರೈತರ ಹಿತ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
ಆಹಾರೋತ್ಪಾದನೆಗೆ ನಿರ್ಮಿಸಿದ ಭದ್ರಾ ಜಲಾಶಯ ಸುಭದ್ರವಾಗಿದೆ. ರಿವರ್ ಸ್ಲೀವ್ ಗೇಟ್ ಹಾಗೂ ಎಮರ್ಜೆನ್ಸಿ ಗೇಟ್‌ಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಪ್ರತಿವರ್ಷ ಬೇಸಿಗೆಯಲ್ಲಿ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇನ್ನು ಡ್ಯಾಂನ ಡ್ರಿಪ್ ಗ್ರೌಂಡಿಂಗ್ ಮಾಡುವ ಅಗತ್ಯವಿದ್ದು, ಈ ಬಗ್ಗೆ ಸೆಂಟ್ರಲ್ ಎಕ್ಸ್‌ಪರ್ಟ್ ಕಮಿಟಿ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಗಾಲದ ಬೆಳೆಗೆ ಭದ್ರಾ ನಾಲೆಗಳಲ್ಲಿ ನೀರು ಹರಿಸುವ ಕುರಿತಂತೆ ಜು.30 ರೊಳಗೆ ನೀರಾವರಿ ಸಲಹಾ ಸಮಿತಿ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಭದ್ರಾ ನಾಲೆಗಳ ನೀರು ಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ಸಾಂಕೇತಿಕ ರಸ್ತೆ ತಡೆ ನಡೆಸಲು ತೀರ್ಮಾನಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಒಗ್ಗಟ್ಟಿನಿಂದ ಭಾಗವಹಿಸಬೇಕು. ಯಾವುದೇ ಸಭೆ ಕರೆದಾಗ ರೈತರು ತಮ್ಮೊಂದಿಗೆ ಇತರರನ್ನು ಕರೆತರಬೇಕು ಎಂದು ತಿಳಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕೊಂಡಜ್ಜಿ ನಾಗರಾಜರಾವ್ ಮಾತನಾಡಿ, ಭದ್ರಾ ಜಲಾಶಯ ನೀರು ನಿರ್ವಹಣೆ ಅಸಮರ್ಪಕವಾಗಿದೆ. ಆಡಳಿತ ಬದಲಾದಂತೆ ರೈತರ ನಿಲುವುಗಳು ಬದಲಾಗುತ್ತಿವೆ. ಆ ಮೂಲಕ ರೈತರನ್ನು ಛಿದ್ರ ಮಾಡುವ ಪರಿಸ್ಥಿತಿ ತಂದೊಡ್ಡಲಾಗಿದೆ. ರೈತರು ಮೊದಲು ಸಂಘಟಿತರಾಗಬೇಕು ಎಂದರು.
ಮುಖಂಡ ಎಚ್.ಎನ್.ಗುರುನಾಥ್ ಮಾತನಾಡಿ, ಡ್ಯಾಂನಿಂದ ನಾಲೆಗೆ ನೀರು ಹರಿಸಿದರೆ ಭತ್ತದ ಸಸಿಮಡಿ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಜಲಾಶಯ ಹಾಗೂ ನಾಲೆಗಳ ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಇದಕ್ಕಾಗಿ ರೈತರು ಸಂಘಟಿತ ಹೋರಾಟ ನಡೆಸಬೇಕು ಎಂದು ಹೇಳಿದರು.
ಮುಖಂಡರಾದ ಎಚ್.ಎನ್.ಶಿವಕುಮಾರ್, ಶಿವರಾಜ್ ಪಾಟೀಲ್, ಸಂಗಪ್ಪಗೌಡ, ಶಿವಾಜಿ ಪಟೇಲ್, ಆವರಗೆರೆ ಸುರೇಶ್, ಇಟ್ಟಿಗೆ ಸಿದ್ದೇಶ್, ಎ.ಎಂ.ಮಂಜುನಾಥ್, ಆರನೇಕಲ್ ವಿಜಯಕುಮಾರ್ ಇತರರು ಇದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net