ಸಿಪಿಐ ದೌರ್ಜನ್ಯ ತನಿಖೆಗೆ ಆಗ್ರಹ

1001272153.jpg
Published on

ದಾವಣಗೆರೆ : ಚನ್ನಗಿರಿ ತಾಲೂಕಿನ ಹೊನ್ನೇಮರದಹಳ್ಳಿ ಗ್ರಾಮಸ್ಥರ ಮೇಲೆ ವೃತ್ತ ನಿರೀಕ್ಷಕ ರವೀಶ್ ದೌರ್ಜನ್ಯ ನಡೆಸಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ತಹಸೀಲ್ದಾರ್ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥ ಬಿ.ಆರ್. ರಘು ಆಗ್ರಹಿಸಿದರು.

ಹೊನ್ನೇಮರದಹಳ್ಳಿ- ಬೊಮ್ಮೇನಹಳ್ಳಿ ಮುಖ್ಯರಸ್ತೆಯ ದೇವರ ಹೊಲದ ಬಳಿಯ ಸೇತುವೆ ಸಮೀಪ, ಮಳೆ ನೀರು ಹೋಗಲು ನಾಲ್ಕಡಿ ವ್ಯಾಸದ ಪೈಪ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದು ಇದನ್ನು ಗ್ರಾಮಸ್ಥರು ಪ್ರಶ್ನಿಸಿದ್ದರು. ಸ್ಥಳಕ್ಕೆ ಬಂದಿದ್ದ ಸಿಪಿಐ ರವೀಶ್ ಕೆಲಸ ಮಾಡಲು ಬಿಡದಿದ್ದರೆ ಗ್ರಾಪಂ ಪಿಡಿಒ ಮೂಲಕ ದಲಿತ ದೌರ್ಜನ್ಯ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಯಾವ ಕಾರಣಕ್ಕೆ ಅಟ್ರಾೃಸಿಟಿ ಕೇಸ್ ದಾಖಲಿಸುತ್ತೀರಿ ಎಂದು ಕೇಳಿದರೆ, ತಾವಿದ್ದ ವಾಹನದಿಂದ ಕೆಳಗಿಳಿಯದೆ ನಮ್ಮ ಮೇಲೆ ವಾಹನ ಹತ್ತಿಸುವ ರೀತಿಯಲ್ಲಿ ವರ್ತನೆ ತೋರಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿ ಕರೆಸಿಕೊಂಡು ತನ್ನನ್ನು ಹೊಡೆಯುವಂತೆ ಪ್ರಚೋದನೆ ನೀಡಿದ್ದಾರೆ. ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪ್ರಾಣಿಗಳಂತೆ ಪೊಲೀಸ್ ವಾಹನಗಳಲ್ಲಿ ತುಂಬಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರು ಕಾಮಗಾರಿ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೆ ಸಿವಿಲ್ ಕಾಮಗಾರಿ ವಿಚಾರ ಸಂಬಂಧವಿಲ್ಲದಿದದರೂ ಸಿಪಿಐ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೆಣ್ಣುಮಕ್ಕಳನ್ನೂ ಸಹ ನಿಂದಿಸಿದ್ದಾರೆ. ಸಿಬ್ಬಂದಿ ಕರೆಸಿಕೊಂಡು ತಾಕತ್ತಿದ್ದೆ ಬನ್ನಿ ನಾನು ಯಾರೆಂದು ತೋರಿಸುತ್ತೇನೆ ಎಂದು ರವೀಶ್ ಹೇಳಿದ್ದರಿಂದ ಗ್ರಾಮಸ್ಥರು ಹೆದರಿ ಮನೆಗಳಿಗೆ ತೆರಳಿದ್ದೇವೆ ಎಂದರು.

ಹೆಣ್ಣುಮಕ್ಕಳನ್ನು ಸೇರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ ಸೆಕ್ಷನ್ 126ರ ಅಡಿಯಲ್ಲಿ ತಹಸೀಲ್ದಾರ್ ಕೋರ್ಟ್‌ನಲ್ಲಿ ಸಿಪಿಐ ರವೀಶ್, 16 ಮಂದಿ ಗ್ರಾಮಸ್ಥರ ವಿರುದ್ಧ ದೂರು ಸಲ್ಲಿಸಿದ್ದಾರೆ. ವಿದ್ಯಾವಂತರ ಬಳಿ ಸನ್ನಡತೆಯಿಂದ ವರ್ತಿಸದ ಪೊಲೀಸ್ ಜನಸಾಮಾನ್ಯರ ಬಳಿ ಹೆಗೆ ವರ್ತಿಸಿಯಾರು? ಎಂದು ಕೇಳಿದರು.

ಈ ವಿಚಾರವಾಗಿ ಐಜಿಪಿ, ಎಸ್ಪಿ, ಡಿಸಿ, ಮಹಿಳಾ ಠಾಣೆಗೆ ದೂರು ನೀಡಿದ್ದೇವೆ. ಆದರೂ ಇದುವರೆಗೆ ಕ್ರಮವಾಗಿಲ್ಲ. ಕೂಡಲೆ ಸಿಪಿಐ ವಿರುದ್ಧ ತನಿಖೆ ನಡೆಸಬೇಕು. ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಮದಿನ ದಿನದಲ್ಲಿ ಗ್ರಾಮದಿಂದ ಕಂದಾಯ ಕಟ್ಟದಂತೆ ನಿರ್ಬಂಧ ಹೇರಲಾಗುವುದು ಎಂದರು.

ಕಾಮಗಾರಿ ನಡೆಯುತ್ತಿದ್ದು, ಬೊಮ್ಮೇನಹಳ್ಳಿ ಗ್ರಾಮಕ್ಕೆ ಓಡಾಡಲು ರಸ್ತೆ ಸರಿಯಿಲ್ಲ. ದಿನವೂ 10 ಶಾಲಾ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಆದರೆ ಕೆಲವು ವಾಹನಗಳು ಈ ಕೆಸರು ರಸ್ತೆಯಲ್ಲಿ ನಿತ್ಯವೂ ಸಿಕ್ಕಿಹಾಕಿಕೊಳ್ಳುತ್ತಿವೆ. ಓಡಾಡಲು ರಸ್ತೆ ಇಲ್ಲದಂತಾಗಿದೆ ಎಂದು ಬೊಮ್ಮೇನಹಳ್ಳಿಯ ಪ್ರಸನ್ನಕುಮಾರ್ ಹೇಳಿದರು.

ಕಾಮಗಾರಿ ನೆಪದಲ್ಲಿ ನನ್ನ ಎರಡು ಎಕರೆ ಜಮೀನು ಹಾಳಾಗಿದೆ ಎಂದು ಜಿ.ವಿ. ರುದ್ರೇಶ್ ಹೇಳಿಕೊಂಡರು. ಸುದ್ದಿಗೋಷ್ಠಿಯಲ್ಲಿ ಎಚ್.ಜಿ. ಉಮಾಪತಿ, ಲೋಕೇಶ್ವರಪ್ಪ, ಎಸ್.ಆರ್. ಶಾಂತವೀರಪ್ಪ, ಡಿ. ಚಂದನಾ, ಎಲ್.ಬಿ. ಚಂದ್ರಪ್ಪ, ಬಿ.ಜೆ. ಶಿವರಾಜ್, ಎಚ್.ಜಿ. ಶಶಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net