

ದಾವಣಗೆರೆ: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಣೆ, ಗೋವುಗಳ ವಧೆ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ಶಿಫಾರಸು ಮಾಡುವಂತೆ ಆಗ್ರಹಿಸಿ ಶ್ರೀರಾಮಸೇನೆ ನಗರ ಘಟಕವು ಶುಕ್ರವಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ್ ಅವರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿತು.
ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದರೆ, ರಾಜ್ಯದಲ್ಲಿ ಸಾವಿರಾರು ಗೋವುಗಳ ಅಕ್ರಮ ಸಾಗಣೆ, ಹಿಂಸೆ ನಡೆಯುತ್ತಿವೆ.
ಹಿಂದು ಕಾರ್ಯಕರ್ತರು ಅಕ್ರಮ ಸಾಗಣೆಯ ವಾಹನಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದರೆ ಅವರ ಮೇಲೆಯೇ ಎಫ್‌ಐಆರ್ ದಾಖಲಿಸಿ ಕಾನೂನು ದುರುಪಯೋಗ ಮಾಡಲಾಗುತ್ತಿದೆ. ಗೋಹತ್ಯೆ ಮಾಫಿಯಾ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು. ಮೈಸೂರು, ಗದಗ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿಗಳಲ್ಲೀಯೂ ಅಕ್ರಮವಾಗಿ ಗೋಹತ್ಯೆ ಮಾಡಿ ಶವಗಳನ್ನು ಬಿಟ್ಟು ಭೀತಿ ಹುಟ್ಟಿಸಲಾಗಿದೆ. ಚಿಕ್ಕಮಗಳೂರಲ್ಲಿ ಗೋವಿನ ಬಾಲಕ್ಕೆ ಫರ್ಪೂಮ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಲ್ಲದೆ ಪ್ರಶ್ನಿಸಿದ ಹಿಂದುಗಳ ಮೇಲೆ ಹಲ್ಲೆಗೆ ಯತ್ನಿಸುವ ಧಾರ್ಮಿಕ ಭಯೋತ್ಪಾದಕ ಮನೋಭಾವ ಹೆಚ್ಚಿದೆ ಎಂದು ಕಿಡಿ ಕಾರಿದರು.
ರಾಜ್ಯಪಾಲರು ಸಾಂವಿಧಾನಿಕ ಅಧಿಕಾರ ಬಳಸಿ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಪ್ರಾಣಿ ಕ್ರೌರ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಸರ್ಕಾರಕ್ಕೆ ಸೂಚಿಸಬೇಕು. ಗೋಹತ್ಯೆ ಮಾಫಿಯಾ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಬೇಕು.
ಕಾನೂನುಬದ್ಧವಾಗಿ ಗೋ ಸಂರಕ್ಷಣೆಯಲ್ಲಿ ತೊಡಗಿದವರ ಮೇಲಿನ ಎಫ್‌ಐಆರ್ ಪ್ರಕರಣಗಳನ್ನು ಕಾನೂನು ಇಲಾಖೆ, ಪೊಲೀಸ್ ಮಹಾನಿರ್ದೇಶಕರು ಹಿಂಪಡೆಯಲು ಸೂಚನೆ ನೀಡಬೇಕು. ರಾಜ್ಯ ಮಟ್ಟದಲ್ಲಿ ವಿಶೇಷ ಗೋ ಸಂರಕ್ಷಣಾ ನಿಯಂತ್ರಣ ದಳ ರಚಿಸಿ ನಿರಂತರ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ರಾಜು ದೊಡ್ಡಮನೆ, ನಗರ ಉಪಾಧ್ಯಕ್ಷ ಆರ್.ಎ. ವಿನಯ್, ಎನ್. ರಘು, ಜೆ. ಮಧು ಇತರರಿದ್ದರು