

ದಾವಣಗೆರೆ: ಲಿಂಗಾಯತ ಮಠಾಧೀಶರಿಗೆ ಅಪಮಾನ ಮಾಡಿದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಬಸವಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಅಲ್ಲಿನ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಲಿಂಗಾಯತ ಮಠಾಧೀಶರ ಒಕ್ಕೂಟ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದೆ. ಬಸವ ಪರವಾದ ಮಠಾಧೀಶರ ಏಕತೆ ಸಹಿಸಿಕೊಳ್ಳಲಾಗದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಲಿಂಗಾಯತ ಮಠಾಧೀಶರನ್ನು ಅಸಾಂವಿಧಾನಿಕ ಮತ್ತು ಅವಾಚ್ಯ ಶಬ್ಧ್ದಗಳಿಂದ ನಿಂದಿಸಿದ್ದು ಸರಿಯಲ್ಲ ಎಂದು ಖಂಡಿಸಲಾಯಿತು.
ಕಾಡಸಿದ್ದೇಶ್ವರ ಸ್ವಾಮೀಜಿ ಮಾತಿನಿಂದ ಲಿಂಗಾಯತ ಸಮುದಾಯಕ್ಕೆ ಅಪಮಾನವಾಗಿದೆ. ಅಲ್ಲದೆ ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತಿವೆ. ಸ್ವಾಮೀಜಿ ನಡೆ ದೇಶದ್ರೋಹಿ ಕೃತ್ಯಕ್ಕೆ ಸಮಾನವಾಗಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಇವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಜಯದೇವ ವೃತ್ತದಲ್ಲಿ ಮಾತನಾಡಿದ ಮುಖಂಡರು ಕಾಡಸಿದ್ದೇಶ್ವರ ಸ್ವಾಮೀಜಿ ತಾಯಿಯನ್ನು ಅವಮಾನಿಸುವ ಮೂಲಕ ಹೆಣ್ಣುಮಕ್ಕಳ ತೇಜೋವಧೆ ಮಾಡಿದ್ದಾರೆ. ಅವರಿಗೆ ಅವರ ಮಠದಲ್ಲೇ ಉತ್ತರ ನೀಡಬೇಕಿದೆ ಎಂದರು.
ಕಾಡಸಿದ್ದೇಶ್ವರ ಸ್ವಾಮೀಜಿ ಪ್ರಚಾರಕ್ಕಾಗಿ ಆಡಿದ ಮಾತುಗಳು ಬಸವ ತತ್ವ ಸಿದ್ಧಾಂತದಲ್ಲಿ ಬೆಳೆಯದ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ವಾರದೊಳಗಾಗಿ ಕೂಡಲೆ ಲಿಂಗಾಯತ ಮಠಾಧೀಶರು, ಸಮಾಜದ ಬಳಿ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಲಿಂಗಾಯತ ಮಠಾಧೀಶರ ಬಗ್ಗೆ ತುಚ್ಛವಾಗಿ ಮಾತನಾಡಿದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಮಿತಿ ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲಿದೆ. ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದೂ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಹುಚ್ಚಪ್ಪ ಮಾಸ್ತರ್, ಕೆ.ಬಿ. ಪರಮೇಶ್ವರಪ್ಪ, ಎಚ್.ಆರ್. ಲಿಂಗರಾಜ್, ಲಿಂಗಾನಂದ ಕಮ್ಮತ್ತಹಳ್ಳಿ, ವಿಶ್ವೇಶ್ವರಯ್ಯ ಹೆಮ್ಮನಬೇತೂರು, ರುದ್ರಗೌಡ ಗೋಪನಾಳ್, ಭರಮಣ್ಣ ಮೈಸೂರು, ಸಿರಿಗೆರೆ ಪರಮೇಶ್ವರಪ್ಪ, ಪ್ರಭು ಕಲಬುರಗಿ, ಆವರಗೆರೆ ರುದ್ರಮುನಿ, ಕಲಿವೀರ ಕಳ್ಳೀಮನಿ, ಜಿ.ಎಂ. ಕುಮಾರಪ್ಪ, ಸಿದ್ದೇಶ್, ವನಜಾ ಮಹಾಲಿಂಗಯ್ಯ, ಮಮತಾ ನಾಗರಾಜ್, ಪೂರ್ಣಿಮಾ ಪ್ರಸನ್ನ, ಕವಿತಾ ನಾಗರಾಜ್ ಇತರರಿದ್ದರು.