

ದಾವಣಗೆರೆ: ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು ತೋಟಗಳು ಒಣಗುತ್ತಿವೆ. ಜಾನುವಾರುಗಳು ಸಂಕಷ್ಟಕ್ಕೆ ಗುರಿಯಾಗಿವೆ. ಆದರೆ, ಆಡಳಿತ ಯಂತ್ರ ರೈತರ ಸಂಕಷ್ಟ ನಿವಾರಣೆಗೆ ಕೆಲಸ ಮಾಡದೆ ಚುನಾವಣೆ ನಂತರ ರಿಲ್ಯಾಕ್ಸ್ ಮಾಡುತ್ತಿದೆ ಎಂದು ರೈತ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಸತೀಶ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ರೆಸಾರ್ಟ್‌ನಲ್ಲಿ ವಿಶ್ರಾಂತಿಗೆ ತೆರಳಿದ್ದಾರೆ. ಅಧಿಕಾರಿಗಳು ರೈತರ ಬದುಕಿನ ಕಡೆ ಗಮನ ಹರಿಸುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಾಲೆಗಳಿಗೆ ಭದ್ರಾ ನೀರು ಸಮರ್ಪಕವಾಗಿ ಹರಿಯದ್ದರಿಂದಾಗಿ ಕಬ್ಬು, ಅಡಕೆ, ತೆಂಗು ಹಾಗೂ ಬಾಳೆ ಗಿಡಗಳು ಒಣಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಜಾನುವಾರುಗಳು ಬಳಲುತ್ತಿದ್ದು ಕಡಿಮೆ ಬೆಲೆಗೆ ಮಾರಲು ರೈತರು ಮುಂದಾಗುತ್ತಿದ್ದಾರೆ ಎಂದು ಹೇಳಿದರು.
ಇನ್ನಾದರೂ ರಾಜ್ಯ ಆಡಳಿತ ರಿಲ್ಯಾಕ್ಸ್ ಮೂಡಿನಿಂದ ಹೊರಬಂದು ಬರ ನಿರ್ವಹಣೆಗೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಬಿಸಿಲಿನ ಝಳದಿಂದ ಒಣಗಿರುವ ಕಬ್ಬು, ಅಡಕೆ, ತೆಂಗು ಬಾಳೆ ಬೆಳೆಗಳ ನಷ್ಟ ಹಾಗೂ ಅಂತರ್ಜಲ ಮಟ್ಟ ಕುಸಿದು ಬತ್ತಿರುವ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಅವುಗಳಲ್ಲಿ ಜಲ ಮರಪೂರಣಕ್ಕೆ ಕ್ರಮ ವಹಿಸಬೇಕು. ನಷ್ಟ ಸಮೀಕ್ಷೆಗಾಗಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ನೀರಾವರಿ ನಿಗಮ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ ರೈತರಿಗೆ ಪರಿಹಾರ ನೀಡುವ ಜಿಲ್ಲಾ ಸಮಿತಿಯಲ್ಲಿ ಕನಿಷ್ಠ ಐವರು ರೈತರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಇದರಿಂದ ಸಮರ್ಪಕ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಶೇ.50ರ ವಿನಾಯಿತಿ ದರದಲ್ಲಿ ಮೇವು ಕಿಟ್ ವಿತರಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಗೋಣಿವಾಡ ಮಂಜುನಾಥ್ ಮಾತನಾಡಿ, ನೀರಿನ ಸಂಕಷ್ಟ ಮತ್ತೆ ಎದುರಾಗುವುದನ್ನು ತಪ್ಪಿಸಲು ಸಾಧ್ಯವಿರುವ ಕಡೆಗಳಲ್ಲಿ ಚೆಕ್‌ಡ್ಯಾಂ ನಿರ್ಮಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಗೊಲ್ಲೂರು ಬಸವರಾಜ್, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಸತೀಶ್ ಶ್ಯಾಗಲೆ ಹಾಗೂ ಮತ್ತಿ ಮಂಜುನಾಥ್ ಇದ್ದರು.
----