ಹಿಂದು ಧರ್ಮ: ಮಠಾಧೀಶರು ಒಮ್ಮತದ ನಿರ್ಣಯ ಮಾಡಲಿ

1001186219.jpg
Published on

ದಾವಣಗೆರೆ: ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಸುವ ಸಂಬಂಧ ವೀರಶೈವ ಮಹಾಸಭಾ ಹಾಗೂ ಎಲ್ಲ ಮಠಾಧೀಶರೂ ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು.

ನಾಡಿನ ಎಲ್ಲಾ ಮಠಾಧೀಶರು ವೀರಶೈವ-ಲಿಂಗಾಯತ ಸಮಾಜವು ಹಿಂದೂ ಧರ್ಮದ ಅಡಿಯಲ್ಲಿಯೇ ಬರಲಿದೆ ಎಂಬುದನ್ನು ಸಮಾಜದವರಿಗೆ ತಿಳಿಸಿ ಹೇಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೀರಶೈವ-ಲಿಂಗಾಯತ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು ಎಂದೂ, ಜಾತಿ-ಉಪಜಾತಿ ಕಾಲಂಗಳಲ್ಲಿ ತಮ್ಮ ಸಮುದಾಯದ ಹೆಸರನ್ನು ಬರೆಸಲು ತರಳಬಾಳು ಮಠ ಹಾಗೂ ಇತರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿ ಸಮಾಜದ ಉಳಿದ ಮಠಾಧೀಶರೂ ತಿಳಿ ಹೇಳಬೇಕು. ಧರ್ಮದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ವಿನಂತಿಸಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಧರ್ಮ-ಜಾತಿಗಳ ನಡುವೆ ಒಡಕು ತರುತ್ತಿದೆ. ಸಿಎಂ ಸಿದ್ದರಾಮಯ್ಯ ಸಮಾಜಗಳ ನಡುವೆ ಬೆಂಕಿ ಹಚ್ಚಿ, ತಮ್ಮ ಬೇಳೆೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

2013ರಲ್ಲಿಯೂ ಕೋಟ್ಯಂತರ ಹಣ ವಿನಿಯೋಗಿಸಿ ನಡೆಸಿದ ಕಾಂತರಾಜು ಆಯೋಗದ ವರದಿ ಕಸದಬುಟ್ಟಿಗೆ ಸೇರಿದೆ. ಈಗ ನಡೆಸುತ್ತಿರುವುದು ಜಾತಿ ಜನಗಣತಿಯಲ್ಲ, ಬದಲಾಗಿ ಆರ್ಥಿಕ ಸಾಮಾಜಿಕ ಸಮೀಕ್ಷೆ ಎಂದು ಸರ್ಕಾರ ಹೇಳಿದೆ. ಹಿಂದುಳಿದ ವರ್ಗ, ತುಳಿತಕ್ಕೆ ಒಳಗಾದವರ ಪರವಾಗಿ ಸಮೀಕ್ಷೆ ನಡೆಸಿದರೆ ಸ್ವಾಗತಿಸುತ್ತೇವೆ. ಆದರೆ ಅದರ ನೆಪದಲ್ಲಿ ಸಂಘರ್ಷ ನಡೆಸಬಾರದು. ಸಿಎಂ ಈ ವಿಚಾರದಲ್ಲಿ ಮೊಂಡುತನ ಬಿಡಬೇಕು ಎಂದರು.

ಸರ್ಕಾರ ಸೂಚಿಸಿದಂತೆ 15 ದಿನದಲ್ಲಿ ಜಾತಿ ಜನಗಣತಿ ನಡೆಸಲು ಸಾಧ್ಯವಿಲ್ಲ. ಸಮೀಕ್ಷೆ ಅವೈಜ್ಞಾನಿಕವಾಗಿ ನಡೆದರೆ, ವ್ಯಯಿಸುವ ನೂರಾರು ಕೋಟಿ ಹಣ ಮಣ್ಣುಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಜಾತಿಗಣತಿಯಲ್ಲಿ 46 ಹೆಚ್ಚುವರಿ ಜಾತಿಗಳನ್ನು ಸೇರಿಸಿ ಹಿಂದು ಧರ್ಮವನ್ನು ಒಡೆಯಲು ಯತ್ನಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮುಂದೊಂದು ದಿನ ಇದೇ ಮಾರಕವಾಗಿ ಪರಿಣಮಿಸಲಿದೆ ಎಂದು ಹೇಳಿದರು.

ಉಡುಪಿಯ ಶ್ರೀಕೃಷ್ಣ ಮಠದವರು ತಮ್ಮಲ್ಲಿದ್ದ ಸುಭದ್ರ ಹೆಸರಿನ ಆನೆಯನ್ನು ಆರೋಗ್ಯ ಸರಿ ಇಲ್ಲದ್ದರಿಂದ 2019ರಲ್ಲಿ ಸಕ್ರೆಬೈಲು ಆನೆ ಶಿಬಿರಕ್ಕೆ ಬಿಟ್ಟಿದ್ದರು. ಹೊನ್ನಾಳಿ ಹಿರೇಕಲ್ಮಠಕ್ಕೆ ಆನೆಯ ಒಡೆತನವನ್ನು ವಹಿಸಲಾಗಿತ್ತು.

12-13 ಲಕ್ಷ ರೂ. ವೆಚ್ಚ ಮಾಡಿ ಪಾಲನೆ ಮಾಡಲ್ಪಟ್ಟ 32 ವರ್ಷದ ಆನೆ ಇಂದು 8 ಟನ್ ತೂಕ ಹೊಂದಿದೆ. ಈಗ ಆನೆಯನ್ನು ಉಡುಪಿ ಮಠಕ್ಕೆ ನೀಡುವಂತೆ ಸಿಎಂ ಮೂಲಕ ಎರಡನೇ ಆದೇಶ ಮಾಡಿಸಿದ್ದರು. ಅರಣ್ಯ ಸಚಿವರಿಗೆ ಈ ಬಗ್ಗೆ ತಿಳಿಸಲಾಗಿದೆ. ಸರ್ಕಾರ ಉಡುಪಿ ಮಠಕ್ಕೆ ಪರ್ಯಾಯ ಆನೆ ಕೊಡಿಸಲಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ್, ಮಾಡಾಳು ಮಲ್ಲಿಕಾರ್ಜುನ್, ಚಂದ್ರಶೇಖರ ಪೂಜಾರ್, ಪಂಜು ಪೈಲ್ವಾನ್, ರಾಜು ವೀರಣ್ಣ, ಸುಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net