ಸವಾಲು ಎದುರಿಸುವ ಜೀವನ ಕೌಶಲವಿರಲಿ

1000516777.jpg
Published on

ದಾವಣಗೆರೆ: ವಿದ್ಯಾರ್ಥಿಗಳು ಎದುರಾಗುವ ಸವಾಲುಗಳನ್ನು ಮೀರಿ ಜ್ಞಾನ ಮತ್ತು ಜೀವನ ಕೌಶಲ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್. ಶಂಕಪಾಲ್ ಹೇಳಿದರು.
ನಗರದ  ಜಿಎಂ ಹಾಲಮ್ಮ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರು ಕಲಿಸಿದ ವಿದ್ಯೆ, ಪಾಲಕರ ಕನಸಿನಂತೆ ಉತ್ತಮ ಜೀವನ ರೂಪಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಸಸ್ಯಪಾಲನಾ ಕೇಂದ್ರಗಳಲ್ಲಿನ ಸುಂದರ ಹೂರಾಶಿ, ಸಸಿಗಳು ಬೆಳೆದ ಬಳಿಕ ಹೂವು-ಹಣ್ಣು ನೀಡುತ್ತವೆ. ಕಾಲೇಜು ವಿದ್ಯಾರ್ಥಿಗಳು ಜ್ಞಾನ ಪಡೆದು ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಬಂದದ್ದನ್ನು ಎದುರಿಸಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.
ಇಂಜಿನಿಯರ್ ಪದವೀಧರರು ಬಡತನ ತೊಡೆದುಹಾಕಲು ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಅಲ್ಲದೇ ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಸೃಷ್ಟಿಸುವ ವಿಕಸಿತ ಭಾರತದ ನಿರ್ಮಾತೃಗಳಾಗಬೇಕು ಎಂದು ತಿಳಿಸಿದರು.
ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ನಾಲ್ವರಿಗೆ ಡಿಎಚ್‌ಡಿ ಪದವಿ ಹಾಗೂ ಇಂಜಿನಿಯರಿಂಗ್‌ನ ಏಳೂ ವಿಭಾಗದ 495 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಧ್ಯಾಹ್ನದ ಸಮಾರಂಭದಲ್ಲಿ 2023-24ನೇ ಶೈಕ್ಷಣಿಕ ಸಾಲಿನ 566 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಇಬ್ಬರಿಗೆ ಪಿಎಚ್‌ಡಿ ಪದವಿ ಪ್ರದಾನಿಸಲಾಯಿತು.
ಕಾರ್ಯಕ್ರಮಗಳಲ್ಲಿ ಶ್ರೀಶೈಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್, ಜಿಎಂಐಟಿಯ ಎಂಬಿಎ ವಿಭಾಗದ ನಿರ್ದೇಶಕ ಡಾ.ಬಿ. ಬಕ್ಕಪ್ಪ, ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್, ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ. ಪ್ರಾಧ್ಯಾಪಕ ಜೆ. ಪ್ರವೀಣ್, ಕೆ.ಎಸ್.ಓಂಕಾರಪ್ಪ ಇದ್ದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net