ಸೂಳೆಕೆರೆ ಒತ್ತುವರಿ ತೆರವಿಗೆ ಗಡುವು

1000847429.jpg
Published on

ದಾವಣಗೆರೆ: ಲೋಕಾಯುಕ್ತ ಕೋರ್ಟ್‌ನಲ್ಲಿ ಹೂಡಿದ ದಾವೆಯನ್ವಯ ಎರಡು ತಿಂಗಳೊಳಗಾಗಿ ಸೂಳೆಕೆರೆ ಒತ್ತುವರಿ ತೆರವುಗೊಳಿಸಬೇಕು. ರೈತರ ಮುಳುಗಡೆ ಜಮೀನುಗಳಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಕಚೇರಿ ಎದುರು ಆಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಖಡ್ಗ ಸ್ವಯಂ ಸೇವಕರ ಸಂಘದ ಅಧ್ಯಕ್ಷ ಬಿ.ಆರ್. ರಘು ಹೇಳಿದರು.

ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಮ್ಮ ಸಂಘವು 2016ರಿಂದಲೇ ಸೂಳಕೆರೆ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ ಮಾಡುತ್ತ ಬಂದಿದೆ. 2021ರಲ್ಲೇ ಸೂಳೆಕೆರೆ ಒತ್ತುವರಿ, ರೈತರ ಮುಳುಗಡೆ ಜಮೀನುಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿಲ್ಲ. ಕ್ರಮ ಕೈಗೊಂಡಿಲ್ಲ ಎಂದು ವಿಷಾದಿಸಿದರು.

ಯಾವುದೇ ಕ್ವಾರೆ, ಗುಡ್ಡದ ಅಕ್ರಮ ಚಟುವಟಿಕೆಗಳು ತಮನಕ್ಕೆ ಬಂದ ಮಾತ್ರಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸುವ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಇತ್ತೀಚೆಗೆ ಸೂಳೆಕೆರೆಗೆ ಅನೌಪಚಾರಿಕವಾಗಿ ಭೇಟಿ ನೀಡಿದ್ದಾಗ್ಯೂ ನಮ್ಮ ಹಳೆಯ ದಾವೆಯ ಪ್ರಸ್ತಾಪಿಸಿಲ್ಲ. ಐದು ವರ್ಷದ ಹಿಂದಿನ ಪ್ರಕರಣದ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಹೈಕೋರ್ಟ್, ಹಸಿರು ನ್ಯಾಯಪೀಠ ಮತ್ತು ಸರ್ಕಾರರಗಳು ಕೆರೆಗಳ ಒತ್ತುವರಿ ತೆರವಿಗೆ ಆದೇಶಿಸಿದ್ದರೂ ಸಂಬಂಧಪಟ್ಟ ಇಲಾಖೆಗಳು ಕ್ಯಾರೆ ಎನ್ನುತ್ತಿಲ್ಲ. ಕರ್ನಾಟಕ ನೀರಾವರಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೇ ಇದಕ್ಕೆ ಕೈಗನ್ನಡಿಯಾಗಿದೆ ಎಂದು ದೂರಿದರು.

ಸೂಳೆಕೆರೆ ಗುಡ್ಡವನ್ನು ಸ್ಫೋಟಿಸಿದ ಸಂದರ್ಭದಲ್ಲೂ ಲೋಕಾಯುಕ್ತರು ದೂರು ಸ್ವೀಕರಿಸದೆ ನಿರಾಸಕ್ತಿ ತೋರಿಸಿದ್ದಾರೆ. ಇದೀಗ ಸೂಳೆಕೆರೆಗೆ ಭೇಟಿಯಿತ್ತ ಉಪಲೋಕಾಯುಕ್ತರು ಪ್ರವಾಸಿ ತಾಣ ಮಾಡುವ, ಪರಿಸರ ರಕ್ಷಿಸುವ ಹಾಗೂ ಒತ್ತುವರಿ ತೆರವಿನ ಬಗ್ಗೆ ಹೇಳಿಕೆ ನೀಡಿರುವುದು ಅಸಮಂಜಸವಾಗಿದೆ ಎಂದರು.

ಸೂಳೆಕೆರೆ ಒತ್ತುವರಿ ಬಗ್ಗೆ ಖಚಿತತೆ ಯಾರಲ್ಲೂ ಇಲ್ಲ. ಕರ್ನಾಟಕ ನೀರಾವರಿ ನಿಗಮ 900 ಎಕರೆ ಎಂದರೆ ಕಂದಾಯ ಇಲಾಖೆ 1200 ಎಕರೆ ಒತ್ತುವರಿ ಎನ್ನುತ್ತದೆ. ಆದರೆ ಉಪ ಲೋಯುಕ್ತರು 219 ಎಕರೆ ಒತ್ತುವರಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಯಾವ ಇಲಾಖೆ ಮಾಹಿತಿ ಆಧಾರದಡಿ ಅವರು ಹೀಗೆ ಹೇಳಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದೇ ಗೊಂದಲವಾಗಿದೆ ಎಂದರು.

2020ರಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮ 11 ಲಕ್ಷ ರೂ.ಗಳನ್ನು ವ್ಯಯಿಸಿ ಖಾಸಗಿ ಏಜೆನ್ಸಿ ಮೂಲಕ ಸೂಳೆಕೆರೆಯನ್ನು ಎಚ್‌ಎಫ್‌ಎಲ್ ಸಮೀಕ್ಷೆ ನಡೆಸಿದ್ದಾರೆ. ಇದುವರೆಗೆ ಕೆರೆಯ ಹದ್ದುಬಸ್ತು ಮಾಡಲಾಗಿಲ್ಲ. ಭ್ರಷ್ಟಾಚಾರ ನಡೆಸಿದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೂಳೆಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ, ಷಣ್ಮುಖಯ್ಯ, ಟಿ.ಕುಬೇಂದ್ರ ಸ್ವಾಮಿ, ಸುನಿಲ್‌ಕುಮಾರ್ ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net