

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಸೋಲಿಗೆ ಕಾರಣ ಹುಡುಕುವ ಭರದಲ್ಲಿ ಜಿಲ್ಲಾ ಬಿಜೆಪಿಯ ಎರಡು ಗುಂಪಿನ ನಡುವೆ ಕೆಸರೆರಚಾಟ ಮುಂದುವರಿದಿದೆ. ಎಸ್.ಎ.ರವೀಂದ್ರನಾಥ್ ಹಾಗೂ ಜಿ.ಎಂ.ಸಿದ್ದೇಶ್ವರ ಬಣಗಳ ಮುಖಂಡರ ನಡುವಿದ್ದ ವಾಕ್ಸಮರ ಇದೀಗ ಕಾರ್ಯಕರ್ತರ ಹಂತಕ್ಕೂ ತಲುಪಿದೆ.
ಬಿಜೆಪಿ ಆಂತರಿಕ ಚೌಕಟ್ಟಿನ ಹೊರತಾಗಿಯೂ ಹರಿಹರ ಶಾಸಕ ಬಿ.ಪಿ.ಹರೀಶ್ ಅವರು ಸುದ್ದಿಗೋಷ್ಠಿ ಮತ್ತು ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಆಡಿದ ‘ಒಳ ಒಪ್ಪಂದ’ ‘ಹೊಂದಾಣಿಕೆ ರಾಜಕೀಯ’ ಮಾತಿನಿಂದಾಗಿ ಜಿಲ್ಲೆ ಹಾಗೂ ರಾಜ್ಯ ಮುಖಂಡರಲ್ಲಿ ಅಸಮಾಧಾನ ಹೊಗೆಯಾಡಿತ್ತು. ಇದಕ್ಕೆ ಪ್ರತಿಯಾಗಿ ಸರಣಿ ಸುದ್ದಿಗೋಷ್ಠಿಗಳು ನಡೆದಿದ್ದು ವಾಗ್ಯುದ್ಧ ತಾರಕಕ್ಕೇರಿದೆ.
‘ಜಿಲ್ಲೆಯಲ್ಲಿ ಸೋಲಿಗೆ ಕಾರಣರಾದ ಲಗಾನ್ ಟೀಂ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿ ಸಿದ್ದೇಶ್ವರ ಬಣದಲ್ಲಿ ಗುರುತಿಸಿಕೊಂಡ ನಾಯಕರು ರಾಜ್ಯ ಮುಖಂಡರಿಗೆ ದೂರು ನೀಡಿದ್ದಾರೆ. ವಾರದೊಳಗೆ ರಾಜ್ಯ ವರಿಷ್ಠರು ಉಭಯ ಗುಂಪಿನವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂಬ ಆಶಯ ಬಿಜೆಪಿ ಪಾಳಯದಲ್ಲಿತ್ತು.
ಆದರೆ ಶನಿವಾರ, ರವೀಂದ್ರನಾಥ್ ಬಣದ ಪರ ಸುದ್ದಿಗೋಷ್ಠಿ ನಡೆಸಿದ ಹೊನ್ನಾಳಿ ಮತ್ತು ಚನ್ನಗಿರಿ ಕಾರ್ಯಕರ್ತರು ‘ಸ್ವಪಕ್ಷೀಯರ ಮತ್ತೊಂದು ಗುಂಪಿನ ಸ್ವಯಂಕೃತ ಅಪರಾಧದಿಂದ ಸೋಲಾಗಿದೆ. ನಾವೂ ಕೂಡ ರಾಜ್ಯ, ರಾಷ್ಟ್ರ ನಾಯಕರಿಗೆ ಪ್ರತಿದೂರು ನೀಡಲು ನಿರ್ಧರಿಸಿದ್ದು ಸಭೆ ನಡೆಸಿ ದಿನಾಂಕ ನಿರ್ಧರಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಮಂಡಲ ಅಧ್ಯಕ್ಷ ಜಿ.ಕೆ ಸುರೇಶ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿಗೆ ‘ದಾವಣಗೆರೆ ಬಾಯ್ಸ’ ಕಾರಣ. ರವೀಂದ್ರನಾಥ್, ಬಹುಹಿಂದೆಯೇ ಲೋಕಸಭೆ ಕ್ಷೇತ್ರದಲ್ಲಿ 500 ಮತಗಳಿಂದ ಸೋಲುಂಡಿದ್ದರು. ಹೀಗಿರುವಾಗ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದು ತಾವೇ ಎಂದು ಹೇಳಿಕೊಳ್ಳಲು ಯಶವಂತರಾವ್ ಅವರಿಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಗಾಯತ್ರಿ ಸಿದ್ದೇಶ್ವರ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿಕೊಳ್ಳುತ್ತಲೇ ಅಪಪ್ರಚಾರ ಮಾಡಿದ್ದೇ ಸೋಲಿಗೆ ಮುಳುವಾಯಿತು. ಇಡೀ ರಾಜ್ಯದಲ್ಲೇ ಪಡೆ ಹೊಂದಿರುವ ರೇಣುಕಾಚಾರ್ಯ ಅವರನ್ನು ಮತ ಪ್ರಚಾರದಲ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಯಾರನ್ನೂ ವಿಶ್ವಾಸಕ್ಕೆ ಪಡೆಯಲಿಲ್ಲ. ನಮ್ಮ ಮುಖಂಡರ ವಿರುದ್ಧ ಅಪಪ್ರಚಾರ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದರು.
ಚನ್ನಗಿಇ ಕಾರ್ಯಕತ್ರ ಬಿ. ಉಮೇಶ್‌ಕುಮಾರ್ ಮಾತನಾಡಿ ಕೆಲವರ ಹಗರಣಗಳಿಂದ ಸೋತೆವು ಎಂಬ ಶಾಸಕ ಬಿ.ಪಿ.ಹರೀಶ್ ಉದ್ದಟತನದ ಹೇಳಿಕೆಯಿಂದಾಗಿ ಇಂದು ಪಕ್ಷದಲ್ಲಿ ಕಿಚ್ಚು ಹೊತ್ತಿದೆ. ನೀವು ಬಿಡಿಎ ನಿವೇಶನಕ್ಕಾಗಿ ನಕಲಿ ದಾಖಲಾತಿ ಸೃಷ್ಟಿಸಿದ್ದರ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಿ ಸ್ವಾಮಿ. ಈ ಹಿಂದೆ ಕಾಂಗ್ರೆಸ್‌ಗೆ ಹೋಗಿ ಬಿಜೆಪಿಯ ಸಿದ್ದೇಶ್ವರ ವಿರುದ್ಧ ಚುನಾವಣಾ ಪ್ರಚಾರ ಮಾಡಿದ್ದು ಮರೆತಿದ್ದೀರಾ? ಎಂದು ಟಾಂಗ್ ನೀಡಿದರು.
ಮಾಡಾಳು ವಿರುಪಾಕ್ಷಪ್ಪ ಹಾಗೂ ಮಾಡಾಳು ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿಯೇ ಚನ್ನಗಿರಿ ಕ್ಷೇತ್ರದಲ್ಲಿ 73 ಸಾವಿರ ಮತಗಳು ಬಂದಿವೆ. ಸಭೆಯಲ್ಲಿ ಜಿಲ್ಲೆಯ ಮುಖಂಡರನ್ನು ಏಕವಚನದಲ್ಲಿ ಮಾತನಾಡುವಾಗ ಉಳಿದೆಲ್ಲ ನಾಯಕರು ಮೌನ ತಾಳಿದ್ದು ಖಂಡನೀಯ. ಹರೀಶ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಉತ್ತರ ಕ್ಷೇತ್ರದ ವಿಚಾರವಾಗಿ ಪ್ರಸ್ತಾಪಿಸುವ ಜಗದೀಶ್ ಅವರೇ ರವೀಂದ್ರನಾಥ್ ಅವರು ಪಕ್ಷ ಕಟ್ಟುವಾಗ ನೀವು ಎಲ್ಲಿದ್ದಿರಿ? ಎಂದು ಪ್ರಶ್ನಿಸಿದರು.
ಬಿಜೆಪಿ ಹಿಂದುಳಿದ ಮೋರ್ಚಾ ರಾಜು ಉಪಾಧ್ಯಕ್ಷ ಕುಬೇರಪ್ಪ ಮಾತನಾಡಿ ಪಕ್ಷದ ಒಳಗೆ ಚರ್ಚಿಸದೆ ಬಿಎಸ್‌ವೈ ಅವರನ್ನು ಟೀಕಿಸಿದ್ದು ಸರಿಯಲ್ಲ. ಸಿದ್ದೇಶ್ವರ ಅವರಿಂದ ಸಹಾಯ ಪಡೆಯಲು ಹರೀಶ್ ಬಕೆಟ್ ಹಿಡಿದಿದ್ದಾರೆ. ವೀರೇಶ್ ಹನಗವಾಡಿ ಹೇಳುವ ಕಡೆಗೆ ಕಾರ್ಯಕರ್ತರೇ ಬರುತ್ತೇವೆ, ಅಲ್ಲ್ಲಿಯೇ ಚರ್ಚೆಯಾಗಲಿ ಎಂದರು.
ಚನ್ನಗಿರಿ ತಾಲೂಕು ಮಾಜಿ ಅಧ್ಯಕ್ಷ ಲೋಹಿತ್‌ಕುಮಾರ್ ಮಾತನಾಡಿ ಎರಡು ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ತುಮ್‌ಕೋಸ್ ಶಿವಕುಮಾರ್ ಟೀಕೆಯಲ್ಲಿ ಅರ್ಥವಿಲ್ಲ. ತಮಗೆ ರಾಜಕೀಯ ಅವಕಾಶ ನೀಡಿದ ಬಿಎಸ್‌ವೈ ವಿರುದ್ಧವಾಗಿ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಎಸ್‌ವಿ. ರಾಮಚಂದ್ರಪ್ಪ ದ್ರೋಹ ಮಾಡಿದ್ದು ಸರಿಯಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಅರಕೆರೆ ನಾಗರಾಜ್, ಹಾಲೇಶ್, ನಲ್ಲೂರು ಮಂಜುನಾಥ, ಮಲ್ಲಿಕಾರ್ಜುನ ಇತರರಿದ್ದರು.