

ದಾವಣಗೆರೆ: ಮಕ್ಕಳಲ್ಲಿನ ತೀವ್ರ ಥರದ ಅಸ್ತಮಾ ನಿಯಂತ್ರಣ ಸಂಬಂಧ ಪಾಶ್ಚಾತ್ಯ ದೇಶಗಳಲ್ಲಿ ರೋಗ ಪ್ರತಿರೋಧಕ ಔಷಧ ಚಾಲ್ತಿಯಲ್ಲಿದೆ. ಭಾರತದಲ್ಲಿ ಇದರ ಬಳಕೆ ಕುರಿತು ವೈದ್ಯರಲ್ಲಿ ಜಿಜ್ಞಾಸೆ ಹೆಚ್ಚಿದೆ ಎಂದು ನಗರದ ಎಸ್‌ಎಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವಿಭಾಗ ಮುಖ್ಯಸ್ಥ ಡಾ.ಎನ್.ಕೆ. ಕಾಳಪ್ಪನವರ್ ಹೇಳಿದರು.
ಇಲ್ಲಿನ ಎಸ್.ಎಸ್. ಕನ್ವೆನ್ಷನ್ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೆಸ್ಪಿಕಾನ್-2024, ಮಕ್ಕಳ ಶ್ವಾಸಕೋಶ ತಜ್ಞರ 36ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ರೋಗ ಪ್ರತಿರೋಧಕ ಔಷಧ ವಾರ್ಷಿಕವಾಗಿ 6ರಿಂದ 10 ಲಕ್ಷ ರೂ. ವೆಚ್ಚವಾಗಲಿದೆ. ಭಾರತದಲ್ಲಿ ಮಕ್ಕಳ ಸಾವು-ನೋವು ತಗ್ಗಲು ಇದರ ಬಳಕೆ ಸಹಕಾರಿಯಾದೀತೆ? ಜಾಗತಿಕ ವೈಜ್ಞಾನಿಕ ಸಮೀಕ್ಷೆ ಪ್ರಕಾರ ಕೆಲವು ವರ್ಗದ ರೋಗಬಾಧಿತ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನಲಾದ ಈ ಔಷಧ ಎಷ್ಟು ಸೂಕ್ತ ಎಂಬುದರ ಬಗ್ಗೆಯೇ ಮಂಥನ ನಡೆಯಬೇಕಿದೆ ಎಂದರು.
ಜಾಗತಿಕ ಅಸ್ತಮಾ ಒಕ್ಕೂಟದಡಿ ಭಾರತದಲ್ಲಿ ಶ್ವಾಸಕೋಶ ತಜ್ಞರು ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ತಮಾ ಕಾಯಿಲೆಗೆ ನೀಡುತ್ತಿರುವ ಚಿಕಿತ್ಸೆ ಹೆಚ್ಚಿದೆಯೇ, ಇದನ್ನು ಕಡಿಮೆ ಮಾಡಬೇಕೆ ಹಾಗೂ ಅಸ್ತಮಾ ಹೆಚ್ಚಳಕ್ಕೆ ಪರಿಸರಮಾಲಿನ್ಯ, ಆನುವಂಶಿಕ ಇತರೆ ಕಾರಣಗಳಿವೆಯೆ ಎಂಬ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು. ಇದೇ ವೇಳೆ ಶ್ವಾಸನಾಳ ದರ್ಶಕ (ಬ್ರಾಂಕೊಸ್ಕೊಪಿ)ದ ಪ್ರಾತ್ಯಕ್ಷಿಕೆ ನೀಡಿ ಅದರ ಅನುಕೂಲತೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಐಎಂಎಸ್ ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ್, ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ. ಅರುಣ್‌ಕುಮಾರ್ ಅಜ್ಜಪ್ಪ, ವೈದ್ಯರಾದ ಡಾ. ಸಂಜೀವ್‌ಸಿಂಗ್ ರಾವತ್, ಡಾ.ಮೂಗನಗೌಡ ಪಾಟೀಲ್, ಡಾ. ಮಧು ಪೂಜಾರ್ ಇತರರಿದ್ದರು. ಡಾ. ಜಗದೀಶ್ ಗೋಯಲ್ ಸ್ವಾಗತಿಸಿದರು. ಡಾ. ಲತಾ ವಂದಿಸಿದರು.
ಇದೇ ವೇಳೆ ಅಸ್ತಮಾ ತರಬೇತಿ ಮಾದರಿ, ಶ್ವಾಸಕೋಶ ಕಾರ್ಯ ಪರೀಕ್ಷೆಗಳು ಸೇರಿ ಐದು ಕಾರ್ಯಾಗಾರ ನಡೆಸಲಾಯಿತು. 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ವೈಜ್ಞಾನಿಕ ಗೋಷ್ಠಿಗಳಲ್ಲಿ ಇಂಗ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ ವಿವಿಧೆಡೆಯ ಅಸ್ತಮಾ ತಜ್ಞರು ಬದಲಾದ ತಂತ್ರಜ್ಞಾನಗಳ ಕುರಿತು ವಿವರಿಸಿದರು.
--