

ದಾವಣಗೆರೆ: ದಾವಣಗೆರೆ ನಗರಪಾಲಿಕೆಯಲ್ಲಿನ ಲಂಚಾವತಾರದ ಬಗ್ಗೆ ಕಿಡಿ ಕಾರಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಅನೇಕ ವರ್ಷದಿಂದ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರನ್ನು ಬದಲಾವಣೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಸಂಸದರು, ಪಾಲಿಕೆಯಲ್ಲಿ ಸೌಲಭ್ಯಗಳನ್ನು ಪಡೆಯಬೇಕಾದರೆ ಹಣ ಇಲ್ಲದೇ ಕೆಲಸ ಆಗುವುದಿಲ್ಲ ಎಂಬ ದೂರುಗಳಿವೆ. ಪಾಲಿಕೆಯಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ನಡೆಸಬೇಕು. ಇನ್ನು ಮುಂದೆ ದೂರು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇ-ಸ್ವತ್ತು, ಕಟ್ಟಡ ಪರವಾನಗಿ, ಟ್ರೇಡ್ ಲೈಸೆನ್ಸ್ ಇನ್ನಿತರೆ ಕೆಲಸಗಳಿಗೆ ಕೆಲವರು ಹಣಕ್ಕೆ ಬೇಡಿಕೆ ಇಡುತ್ತಿರುವ ಮಾಹಿತಿ ಇದೆ. ಇಂತಹ ಭ್ರಷ್ಟ ಅಧಿಕಾರಿ ಮತ್ತು ನೌಕರರನ್ನು ಮನೆಗೆ ಕಳುಹಿಸಿ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಎಂದು ಆಯುಕ್ತೆ ರೇಣುಕಾ ಅವರಿಗೆ ಸೂಚನೆ ನೀಡಿದರು.
ದಾವಣಗೆರೆ ನಗರದ ಕಸ ವಿಲೇವಾರಿಯಲ್ಲಿ ಸಾಕಷ್ಟು ಲೋಪ ದೋಷಗಳಿದ್ದು, ಪರಿಸರ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಸೇರಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ಮಾಡುವಂತೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಬೇಕು ಹಾಗೂ ಗುತ್ತಿಗೆದಾರರರಿಗೆ ಕಿರುಕುಳ ನೀಡದೆ ಕಾಮಗಾರಿ ಮುಗಿದ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದರು.
ಪಾಲಿಕೆಯಿಂದ ವಿವಿಧ ಯೋಜನೆಯಡಿ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅರ್ಹರನ್ನು ಗುರುತಿಸುವ ವೇಳೆ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಡಬಾರದು ಎಂದೂ ಸೂಚಿಸಿದರು. ಪಾಲಿಕೆ ಅಧಿಕಾರಿಗಳಾದ ಉದಯಕುಮಾರ್, ಬಸವಣ್ಣ ಇತರರಿದ್ದರು.