

ದಾವಣಗೆರೆ: ನಿಟುವಳ್ಳಿಯ ಶ್ರೀ ಜೋಡಿ ಬನ್ನಿ ಮಹಾಂಕಾಳಿ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿಯಿಂದ ವಿಜಯದಶಮಿ ಅಂಗವಾಗಿ ಸೆ.22ರಿಂದ ಅ.2ರ ವರೆಗೆ ದೇವನಗರಿ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಕಳೆದ 22 ವರ್ಷದಿಂದ ಉತ್ಸವ ನಡೆಸಿಕೊಂಡು ಬರಲಾಗಿದೆ. ಹತ್ತು ದಿನಗಳ ಕಾರ್ಯಕ್ರಮ ವೈವಿಧ್ಯದೊಂದಿಗೆ ಈ ಬಾರಿ ಉತ್ಸವ ಆಯೋಜಿಸಲಾಗಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷೆ ಗುಂಡಿ ಪುಷ್ಪಾ ಸಿದ್ದೇಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಸಂಜೆ ರಾ. ರಾ. ವಿ. ಪುಷ್ಪಾ ಹಾಗೂ ಚಿತ್ತರಗಿ ಆಶಾ ಅವರಿಂದ ಶ್ರೀದೇವಿ ಪಾರಾಯಣ ನಡೆಯಲಿದೆ. 6-30ಕ್ಕೆ ಮನರಂಜನೆ ಕಾರ್ಯಕ್ರಮ ನಡೆಯಲಿವೆ. ಸೆ. 22ರಂದು ಬೆಳಗ್ಗೆ 9-30ರಿಂದ ಶ್ರೀದೇವಿ ಮೂರ್ತಿಯನ್ನು ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲಾಗುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
22ರ ಸಂಜೆ ಶುಭದಾ ತಂಡದವರಿಂದ ವೀಣಾವಾದನ, ಶ್ರೀ ವೀರಭದ್ರೇಶ್ವರ ತಂಡದಿಂದ ವೀರಗಾಸೆ ಪ್ರದರ್ಶನವಿದೆ. ಸೆ. 23ರಂದು ವಿದುಷಿ ಅಶ್ವಿಕಾ ಐನಹಳ್ಳಿ ಶಿಷ್ಯರಿಂದ ಶ್ರೀದೇವಿ ನೃತ್ಯವೈಭವ ಭರತನಾಟ್ಯ, ಚಮನ್, ಬುಡೇನ್ ತಂಡದಿಂದ ಗಾಯನವಿದೆ.
ಸೆ. 24ರಂದು ಮಹೇಶ್ ಮೆಲೋಡಿಸ್‌ನ ಡಿ. ಮಹೇಶ್ವರಪ್ಪ ಸಂಗಡಿಗರಿಂದ ಹಳೆಯ ಚಿತ್ರಗೀತೆಗಳ ಗಾಯನವಿದೆ. 25ರಂದು ಕದಳಿ ವೇದಿಕೆಯಿಂದ ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘದಿಂದ ‘ಮಗ ಹೋದರೂ ಮಾಂಗಲ್ಯ ಬೇಕು’ ಸಾಮಾಜಿಕ ನಾಟಕ ಪ್ರದರ್ಶನವಿದೆ.
26ಕ್ಕೆ ಜಯಲಕ್ಷ್ಮಿ ನಾಟಕ ಸಂಘದಿಂದ ಶ್ರೀ ರೇಣುಕಾದೇವಿ ಮಹಾತ್ಮೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನವಿದೆ. 27ಕ್ಕೆ ನಮನ ಅಕಾಡೆಮಿಯಿಂದ ನೃತ್ಯ ನಮನ, ಶ್ರೀಕೃಷ್ಣ ವಿಲಾಸಂ ನೃತ್ಯರೂಪಕವಿದೆ.
28ಕ್ಕೆ ಕಲಾವಿಕಾಸ ನಾಟಕ ಸಂಘದಿಂದ ‘ಕಂಬನಿ’ ಹಾಸ್ಯಭರಿತ ನಾಟಕ, 29ರಂದು ಡಿ. ಮಹೇಶ್ವರಪ್ಪ ತಂಡದಿಂದ ಸುಗಮ ಸಂಗೀತ, 30ರಂದು ಜಯಲಕ್ಷ್ಮಿ ನಾಟಕ ಸಂಘದಿಂದ ‘ತವರುಮನೆ’ ನಾಟಕ, ಅ.1ರಂದು ‘ತಾಯಿಕರುಳು ಅರ್ಥಾತ್ ಸೊಕ್ಕಿನ ಸೊಸೆ’ ಸಾಂಸಾರಿಕ ನಾಟಕ ಪ್ರದರ್ಶನವಿದೆ.
ಅ.2ರಂದು ಸಂಜೆ ನಿಟುವಳ್ಳಿ ರಾಜಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮೆರವಣಿಗೆಯು ದೇವಸ್ಥಾನದ ಆವರಣಕ್ಕೆ ಬಂದು ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮವಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಮಹೇಶ್ವರಪ್ಪ ದೊಡ್ಡಮನಿ, ನಿಟುವಳ್ಳಿ ಮುರುಗೇಶ್ ಇದ್ದರು.