ವ್ಯಾಪಾರದ ಸರಕಾದ ರಿಯಾಲಿಟಿ ಶೋಗಳು

1000639703.jpg
Published on

ದಾವಣಗೆರೆ: ಮಕ್ಕಳನ್ನು ಕರೆಸಿ ಹಾಡಿಸುವ ಟಿವಿ ರಿಯಾಲಿಟಿ ಶೋಗಳದ್ದು ಒಂದು ವ್ಯಾಪಾರ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಟೀಕಿಸಿದರು.
ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿರಂತನ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಟಿವಿಗಳು ಕಣ್ಣೀರನ್ನು ಟಿಆರ್‌ಪಿ ಆಗಿ ಬಳಸಿಕೊಳ್ಳುತ್ತಿವೆ. ಮಕ್ಕಳನ್ನು ಸೋಲಿಸಿ ಗೆಲ್ಲಿಸಿ, ಅವರ ಮನಸ್ಸಿನಲ್ಲಿ ವಿಷ ಅಥವಾ ನೋವನ್ನು ನಿರಂತರವಾಗಿ ಹುಟ್ಟಿ ಹಾಕುತ್ತಿವೆ. ಹೀಗಾಗಿ ರಿಯಾಲಿಟಿ ಶೋಗಳ ಹಿಂದೆ ಹೋಗದಿರಿ. ಮಕ್ಕಳಿಗೆ ಆನಂದ ಕೊಡುವ ನಿಜವಾದ ಸಂಗೀತ ಕಲೆಗಳನ್ನು ಕಲಿಸಿ ಎಂದು ಮನವಿ ಮಾಡಿದರು.
ಇಂದಿನ ಟಿವಿ ಧಾರಾವಾಹಿಗಳಲ್ಲಿ ಮಹಿಳಾ ಕೇಡಿಗಳೇ ಹೆಚ್ಚಿದ್ದು, ಉತ್ತಮ ಮಹಿಳೆಯರನ್ನು ಬಿಂಬಿಸುವುದಿಲ್ಲ. ಅತ್ತೆ-ನಾದಿನಿಯರಿಗೆ ಕಾಟ ಕೊಡುವುದನ್ನೇ 60 ಧಾರಾವಾಹಿಗಳು ನಿತ್ಯವೂ ವೀಕ್ಷಕರಿಗೆ ಉಣಬಡಿಸುತ್ತಿವೆ ಎಂದು ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಬೇಕೆಂದು ಪಾಲಕರು ಬಯಸುವುದು ಸಹಜ. ಸಂಗೀತ ಕಲೆಗಳು ನೀಡುವ ಆನಂದ, ನೆಮ್ಮದಿ ಅಥವಾ ಅನುಭೂತಿಯನ್ನು ಯಾವುದೇ ಹಣ, ಆಸ್ತಿ ನೀಡುವುದಿಲ್ಲ.
ಸಂಗೀತ ಕಲೆಗಳನ್ನು ಕಲಿತ ಮಕ್ಕಳು ಏನು ಆಗದಿದ್ದರೂ ಅವರ ಮನಸ್ಸಿನಲ್ಲಿ ಶಾಂತಿ-ನೆಮ್ಮದಿ ತರಲಿದೆ. ಇದನ್ನು ಟಿವಿ-ಸಿನಿಮಾಗಳು ನೀಡುವುದಿಲ್ಲ. ಮಕ್ಕಳು ಸೇರಿ ಮೂರನೇ ತಲೆಮಾರಿನವರಿಗೆ ಆಸ್ತಿ ಮಾಡಲು ಮುಂದಾಗುವ ಪಾಲಕರು ಮಕ್ಕಳಿಗೆ ಆನಂದ ಕೊಡುವತ್ತ ಗಮನ ನೀಡುತ್ತಿಲ್ಲ ಎಂದು ವಿಷಾದಿಸಿದರು.
ದಾವಣಗೆರೆಯಂತಹ ಪಟ್ಟಣದಲ್ಲಿ ಚಿರಂತನ ಸಂಸ್ಥೆಯು ದೂರದ ಊರುಗಳ ಸಂಗೀತ, ನೃತ್ಯ ಮೊದಲಾದ ವಿವಿಧ ಕ್ಷೇತ್ರದ ಶಿಕ್ಷಕರನ್ನು ಕರೆಸಿ ಅವರಿಂದ ಕಲಾ ಶಿಕ್ಷಣ ಕೊಡಿಸುತ್ತಿರುವುದು ಗಮನಾರ್ಹವಾದುದು ಎಂದರು.
ವೀಣಾವಾದಕಿ ರೇವತಿ ಕಾಮತ್  ಮಾತನಾಡಿ ಮಕ್ಕಳಿಗೆ ಸಂಗೀತ-ನೃತ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಕಲಿಸಿದರೆ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗದು. ಬದಲಾಗಿ ಅವರ ಮಿದುಳಿನಲ್ಲಿ ವಿಶೇಷ ಜೀವಕೋಶಗಳು ಸೃಜಿಸಿ ಶಿಕ್ಷಣಕ್ಕೆ ಪೂರಕ ಆಗಲಿವೆ. ಹೀಗಾಗಿ ದಿನದ ಅರ್ಧ ತಾಸು ಪಠ್ಯೇತರ ಚಟುವಟಿಕೆಗೆ ಮೀಸಲಿಡಿ ಎಂದು ಕೋರಿದರು.
ಬೆಂಗಳೂರಂಥ ನಗರದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಹವಾಮಾನ ಬದಲಾಗುತ್ತಿದೆ. ಹೀಗಾಗಿ ನಮ್ಮ ಪರಿಸರದಲ್ಲಿ ದೇಶೀ ತಳಿಯ ಗಿಡಗಳನ್ನು ಮಾತ್ರ ಬೆಳೆಸಿ. ವಿದೇಶಿ ಗಿಡಗಳನ್ನು ಪ್ರೋತ್ಸಾಹಿಸಬೇಡಿ. ಹಾಗೆ ಮಾಡುವವರನ್ನು ವಿರೋಧಿಸಿ. ನಿಮ್ಮ ಜೀವಮಾನದಲ್ಲಿ ಕನಿಷ್ಠ 1 ಮರವನ್ನು ಬೆಳೆಸುವ ಶಪಥ ಮಾಡಿ ಎಂದು ಹೇಳಿದರು.
ಚಿರಂತನ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ದೀಪಾ ಎನ್. ರಾವ್ ಮಾತನಾಡಿ 24 ವರ್ಷದಲ್ಲಿ ಏಳುಬೀಳುಗಳ ನಡುವೆ ಚಿರಂತನ ನಡೆದು ಬಂದಿದೆ. ಇದುವರೆಗೆ 16 ಸಾವಿರ ಮಕ್ಕಳು ಸಂಗೀತ, ನೃತ್ಯ ಕಲೆ ಕಲಿತಿದ್ದಾರೆ. ಸಂಸ್ಥೆಗೆ ನಗರದಲ್ಲಿ ಸೂಕ್ತ ಜಾಗ ಸಿಕ್ಕಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಂಗಮಂದಿರ ನಿರ್ಮಿಸುವ ಮಹದಾಸೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜ ಸೇವಕಿ ಲತಿಕಾ ದಿನೇಶ್ ಕೆ ಶೆಟ್ಟಿ, ಚಿರಂತನ ಸಂಸ್ಥೆಯ ಸಲಹೆಗಾರ ಡಾ.ಬಿ.ಟಿ.ಅಚ್ಯುತ್, ಕಾರ್ಯದರ್ಶಿ ಮಾಧವ ಪದಕಿ, ಅಲಕಾನಂದ ರಾಮದಾಸ್ ಇದ್ದರು.
ಚಿರಂತನ ಮಕ್ಕಳು ಶ್ಲೋಕಾಂಜಲಿ, ಭಾಗ್ಯದ ಲಕ್ಷ್ಮಿ ಭಾರಮ್ಮ, ವಚನ ವೈಭವ, ನಟನವಾಡಿದಳ್ ತುಣಿ, ಬಾರಿಸು ಕನ್ನಡ ಡಿಂಡಿಮವ ಮೊದಲಾದ ನೃತ್ಯ ಪ್ರದರ್ಶಿಸಿದರು. ಬೆಂಗಳೂರಿನ ಸಂಜಯ್ ಶಾಂತಾರಾಂ, ರಕ್ಷಾ ರಾಜಶೇಖರ್ ಅವರು ಭೂತಕೋಲ, ಕರುನಾಡ ವೈಭವ ವಿವಿಧ ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net