ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ವಿತರಿಸಿ  ಪ್ರಾಂತ ರೈತ ಸಂಘದ ಸಭೆಯಲ್ಲಿ ಟಿ. ಯಶವಂತ್ ಒತ್ತಾಯ

1000346919.jpg
Published on

ದಾವಣಗೆರೆ: ಬಗರ್‌ಹುಕುಂ ಸಾಗುವಳಿ ಸಕ್ರಮಾತಿಗೆ ಸಲ್ಲಿಸಲಾದ ಅರ್ಜಿಗಳನ್ನು ಮಾನ್ಯ ಮಾಡಿ ಹಕ್ಕುಪತ್ರ ವಿತರಿಸಬೇಕು ಹಾಗೂ ಹಕ್ಕುಪತ್ರ ಪಡೆದಿರುವ ಎಲ್ಲಾ ರೈತರಿಗೆ ಪೋಡಿ ದರಖಾಸ್ತು ಪ್ರಕ್ರಿಯೆ ಆರಂಭಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಡವರಿಗೆ ಭೂಮಿ ಹಕ್ಕು ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಬಡವರಿಗೆ ಭೂಮಿ ನೀಡದೆ ವಂಚಿಸುತ್ತಿದೆ. ಬಂಡವಾಳಶಾಹಿಗಳು ರಾಜ್ಯ ಸರ್ಕಾರದ ಭೂ ನೀತಿಯ ಪ್ರಧಾನ ಫಲಾನುಭವಿ ಆಗುತ್ತಿದ್ದಾರೆ ಎಂದು ದೂರಿದರು.
ಪ್ರತಿ ಎಕರೆಗೆ ಮೂರು ಕೋಟಿ ರೂ.ಬೆಲೆ ಬಾಳುವ ಬಳ್ಳಾರಿ ಜಿಲ್ಲೆ ತೋರಣಗಲ್ ಪ್ರದೇಶದ 3667 ಎಕರೆ ಭೂಮಿಯನ್ನು ಒಂದು ಲಕ್ಷ ರೂ.ಗೆ ಕ್ರಯ ಮಾಡಿ ಹಸ್ತಾಂತರಿಸಲಾಗುತ್ತಿದೆ. ರಾಜ್ಯದೆಲ್ಲೆಡೆ ಬಲವಂತದಿಂದ ಭೂ ಸ್ವಾಧೀನ ಮೂಲಕ ಪಡೆದುಕೊಂಡ ರೈತರ ಭೂಮಿ ಯನ್ನು ಬಂಡವಾಳಶಾಹಿಗಳಿಗೆ ಧಾರೆ ಎರೆಯಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರದ ಕಾರ್ಪೋರೇಟ್ ಕಂಪನಿ ಪರವಾದ ಧೋರಣೆಗಳನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ದಾವಣಗೆರೆ ಜಿಲ್ಲಾ ಸಂಚಾಲಕ ಇ. ಶೀನಿವಾಸ್ ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಜನ ಬಗರ್‌ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗುತ್ತಿದೆ. ಕಂದಾಯ ಇಲಾಖೆ ಕೊಟ್ಟಿರುವ ಸಾಗುವಳಿ ಹಕ್ಕುಪತ್ರ ಇದ್ದರೂ ನಲ್ಕುಂದ, ಹುಲಿಕಟ್ಟೆ, ನೀಲಗಲ್ಲು, ಮ್ಯಾಸ್ರಳ್ಳಿ ಮಾಯಕೊಂಡ ಸೇರಿ ಹತ್ತಾರು ಹಳ್ಳಿಗಳಲ್ಲಿ ಅರಣ್ಯ ಇಲಾಖೆಯ ಮೂಲಕ ಒಕ್ಕಲೆಬ್ಬಿಸಲು ಕಿರುಕುಳ ದೌರ್ಜನ್ಯ ನೀಡಲಾಗುತ್ತಿದೆ ಎಂದು ದೂರಿದರು.
ಮನೆ, ನಿವೇಶನ ಇಲ್ಲದಂತಹ ಸಾವಿರಾರು ಜನರಿಗೆ ನಿವೇಶನ ಕೊಡಲು ಸರ್ಕಾರ ಕ್ರಮವಹಿಸುತ್ತಿಲ್ಲ. ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ ಐವತ್ತಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೂ ಜಿಲ್ಲೆಯ ಶಾಸಕರು ಮತ್ತು ಸಂಸದರು ಮೌನವಾಗಿದ್ದಾರೆ ಎಂದು ಕಿಡಿ ಕಾರಿದರು. ಫಾರಂ ನಂಬರ್ 50, 53, 57ರಲ್ಲಿ ಸಲ್ಲಿಸಿರುವ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು ಎಂದೂ ಆಗ್ರಹಿಸಿದರು.
 ಸಭೆಯಲ್ಲಿ ತಾಲೂಕು ಸಮಿತಿ ಮುಖಂಡರಾದ ಭರ್ಮಪ್ಪ ನಲ್ಕುಂದ, ರಾಜಣ್ಣ ನೀಲಗಲ್, ಮಹಾಂತೇಶ್, ನಾಗರಾಜ್ ಹಾಗೂ ಹಲವಾರು ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net