

ದಾವಣಗೆರೆ: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ದಲಿತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯ ಖಜಾನೆಗೆ ಕನ್ನ ಹಾಕುವ ಹೆಗ್ಗಣಗಳೇ ಹೆಚ್ಚಿರುವಾಗ ಖಜಾನೆ ಉಳಿಯುವುದೆಲ್ಲಿ? ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಜನಸಾಮಾನ್ಯರ ತೆರಿಗೆ ಹೆಚ್ಚಿಸಿ ಖಜಾನೆ ತುಂಬಿಸಲು ಆಗದು. ಮೊದಲು ಹೆಗ್ಗಣಗಳನ್ನು ನಿಯಂತ್ರಣ ಮಾಡಬೇಕು, ಇಲ್ಲವಾದರೆ ರಾಜ್ಯದ ಖಜಾನೆ ಉಳಿಯೋದಿಲ್ಲ ಎಂದರು.
ಸಿದ್ದರಾಮಯ್ಯ ಕುರ್ಚಿ ಮೇಲೆ ಕೂರುವ ಹಾಗಿಲ್ಲ. ರಾಜೀನಾಮೆ ನೀಡಬೇಕು. ಎಲ್ಲರೂ ಭ್ರಷ್ಟರು ಅಂತ ಹೇಳುತ್ತಿದ್ದವರೇ ಆಪಾದಿತರಾಗಿರುವ ಕಾರಣಕ್ಕೆ ಸಮರ್ಥನೆ ಮಾಡಿಕೊಳ್ಳಲು ಆಗುತ್ತದಾ? ಇದರಿಂದ ಅವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆಯೇ ಹೊರತಾಗಿ ಯಾವ ಅಂತರಾತ್ಮವೂ ಸಹ ಒಪ್ಪುವುದಿಲ್ಲ.
ಅಂಗೈಯಲ್ಲಿ ಹುಣ್ಣಿನ ಥರ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಇದಕ್ಕೆ ಸದನದಲ್ಲಿ ಸಾಕ್ಷಿ ಸಹಿತ ದಾಖಲೆ ಕೊಡುತ್ತೇವೆ. ಆಗಲೂ ನೀವು ರಾಜೀನಾಮೆ ನೀಡದಿದ್ದಲ್ಲಿ ಇದನ್ನು ಜನರ ಮುಂದಿಡುತ್ತೇವೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮ, ಗಂಗಾ ಕಲ್ಯಾಣಕ್ಕೆ ನೀಡಬೇಕಿದ್ದ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ. ವಾಲ್ಮೀಕಿ ನಿಗಮದ ಗುರಿ ಶೂನ್ಯವಾಗಿದೆ. ವಾಲ್ಮೀಕಿ ನಿಗಮದ ಗುರಿ ಶೂನ್ಯ ಆಗಿದ್ದು ಇದೆಲ್ಲ ಸಿದ್ದರಾಮಯ್ಯ ಅವರ ಆಪ್ತರ ನಕಲಿ ಖಾತೆಗೆ ಜಮೆ ಆಗಿದೆ.
ಮುಡಾದಲ್ಲಿ ಪಿಂಚಣಿ ಹಣ, ಕೂಡಿಟ್ಟ ಹಣ ಸೇರಿಸಿ ನಿವೇಶನಕ್ಕೆ ಅರ್ಜಿ ಹಾಕಿದವರಿಗೆ ನಿವೇಶನವಿಲ್ಲ. ಆದರೆ ಸಿದ್ದರಾಮಯ್ಯನವರ ಪತ್ನಿ ಹೆಸರಿಗೆ 16 ನಿವೇಶನಗಳು ಇವೆ. ಎಲ್ಲಾ ಮಹಾನಗರ ಪಾಲಿಕೆಯಲ್ಲಿ ಕೂಡ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದರು