15 ದಿನದಲ್ಲಿ ಬೆಳೆಹಾನಿ ಪರಿಹಾರ  ಸಚಿವ ಕೃಷ್ಣ ಬೈರೇಗೌಡ ಮಾಹಿತಿ

1000462055.jpg
Published on

ದಾವಣಗೆರೆ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 56993 ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಗೀಡಾಗಿದ್ದು ಮೂರು ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ಮುಂದಿನ 15 ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆ ಕೋಡಿ, ಹಿರೇಮಲ್ಲನ ಹೊಳೆಯಲ್ಲಿ ನಷ್ಟಕ್ಕೆ ತುತ್ತಾದ ಬೆಳೆ ವೀಕ್ಷಿಸಿ ಮಾತನಾಡಿ, ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು  ಪ್ರಾಥಮಿಕ ಅಂದಾಜಿಗಿಂತ ಹೆಚ್ಚಿನ ಹಾನಿ ಆಗಿರುವ ಸಾಧ್ಯತೆ ಇದೆ. ಸಮೀಕ್ಷೆ ವರದಿ ಕೈಸೇರಿದ ಬಳಿಕ ನಿಖರ ಮಾಹಿತಿ ಲಭಿಸಲಿದೆ ಎಂದರು.
ಇದಕ್ಕಾಗಿ ಶನಿವಾರ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಲಹೆ, ಸೂಚನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಇದುವರೆಗೆ 121ಜನ  ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರಿನಲ್ಲಿ  2589 ಹಾಗೂ ಹಿಂಗಾರಿನಲ್ಲಿ 121 ಮನೆಗಳು ಬಿದ್ದಿವೆ ಎಂದು ತಿಳಿಸಿದರು.
666 ಕೋಟಿ ರೂ.
ಪ್ರಕೃತಿ ವಿಕೋಪ ಎದುರಿಸಲು ಅನುದಾನದ ಕೊರತೆ ಇಲ್ಲ. ಬೆಳೆ ಹಾನಿ, ಜೀವಹಾನಿ, ಮನೆ ಬಿದ್ದು ಹೋಗಿದ್ದಲ್ಲಿ ತಕ್ಷಣ ಪರಿಹಾರ ನೀಡಲು ಜಿಲ್ಲಾಧಿಕಾರಿ, ತಹಸೀಲ್ದಾರರ ಖಾತೆಗಳಲ್ಲಿ 666 ಕೋಟಿ ರೂ. ಹಣವಿದೆ ಎಂದು ಸಚಿವರು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ವಾಡಿಕೆಗಿಂತ ಶೇ.190 ರಷ್ಟು ಹೆಚ್ಚು ಮಳೆಯಾಗಿದ್ದು  ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಬೆಳೆ ನಷ್ಟದ  ಪ್ರಮಾಣವೂ ಹೆಚ್ಚಿದೆ. ವರದಿ ನೀಡಲು ಜಿಲ್ಲಾಧಿಕಾರಿಗೆ  ತಿಳಿಸಲಾಗಿದೆ.
ಜಲಾವೃತವಾದ ಹಿರೇಮಲ್ಲನಹೊಳೆ ಗ್ರಾಮದ 35 ಮನೆಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಪರಿಹಾರದ ಜತೆಗೆ ಬೇರೆಡೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
 ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‌ನಿಂದ- ಮೇ ವರೆಗೆ  251.8 ಹೆಕ್ಟೇರ್ ಬೆಳೆ ಹಾನಿಯಾ ಗಿದೆ. 11.24 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ  ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ , ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net