

ದಾವಣಗೆರೆ: ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.26ರಿಂದ ಡಿ.1ರವರೆಗೆ ಶಾಮನೂರು ಡೈಮಂಡ್ ಶಿವಗಂಗಾ ಕಪ್ 2024-ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ, ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಹೊನಲು ಬೆಳಕಿನಲ್ಲಿ ಪಂದ್ಯಾವಳಿ ನಡೆಯಲಿದೆ. ನ.26ರಂದು ಸಂಜೆ 6-30ಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮೇಯರ್ ಚಮನ್‌ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಶ್ರೀನಿವಾಸ ಶಿವಗಂಗಾ, ಮಹದೇವ ಇತರರು ಭಾಗವಹಿಸುವರು ಎಂದರು.
ಶ್ರೀಲಂಕಾ, ಮಹಾರಾಷ್ಟ್ರ ಹಾಗೂ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ 50 ತಂಡಗಳಿಂದ 750 ಕ್ರಿಕೆಟ್ ಪಟುಗಳು ಭಾಗವಹಿಸುವರು. ಎಲ್ಲ ಕ್ರೀಡಾಪಟುಗಳಿಗೂ ಟಿ ಶರ್ಟ್ ಹಾಗೂ ಊಟ-ವಸತಿ ಸೌಲಭ್ಯ ಕಲ್ಪಿಸಲಾಗುವುದು.
ವಿಜೇತರಿಗೆ ಪ್ರಥಮ ಬಹುಮಾನವಾಗಿ 5,05,555 ನಗದು ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಬಹುಮಾನವಾಗಿ 3,05,555 ನಗದು ಹಾಗೂ ಶಿವಗಂಗಾ ಕಪ್, ತೃತೀಯ ಬಹುಮಾನವಾಗಿ 1,55,500 ನಗದು ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು.
ಪತ್ರಕರ್ತರು, ವರ್ತಕರು, ಪಾಲಿಕೆ ಸದಸ್ಯರು, ಪೊಲೀಸ್, ಆರೋಗ್ಯ, ಕೆಇಬಿ, ಬೆಸ್ಕಾಂ, ಡಾನ್ಸರ್ ಸೇರಿ ಒಟ್ಟು 12 ತಂಡಗಳಿಗೆ ಅಫಿಷಿಯಲ್ ಟೂರ್ನಿ ನಡೆಯಲಿದೆ. ನ.26ರಂದು ಸಂಜೆ ಈ ಪಂದ್ಯಾಟ ಶುರುವಾಗಲಿದೆ. ನ.30ರಂದು ಸಂಜೆ ಶ್ರೀಲಂಕಾ ಹಾಗೂ ಭಾರತ ತಂಡದ ಹೆಸರಲ್ಲಿ ಪ್ರದರ್ಶನಾ ಪಂದ್ಯ ನಿಗದಿಯಾಗಿದೆ. ಟೂರ್ನಿಗೆ ಸುಮಾರು 35 ಲಕ್ಷರೂ ವೆಚ್ಚವಾಗಲಿದೆ. ಯೂಟೂಬ್‌ನಲ್ಲಿ ಪಂದ್ಯಾವಳಿಗಳ ನೇರಪ್ರಸಾರ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ್ಯದರ್ಶಿ ಜಯಪ್ರಕಾಶ್ ಗೌಡ, ರಂಗಸ್ವಾಮಿ, ಹಾಲಪ್ಪ, ಶಾಂತಕುಮಾರ್, ಯೋಗೀಶ್, ಜಿ.ಬಿ. ಪಾಟೀಲ್, ರಾಘವೇಂದ್ರ, ಆಕಾಶ್, ಕಾರ್ತೀಕ್ ಇದ್ದರು.
----