

ದಾವಣಗೆರೆ: ಕ್ರೀಡಾ ಚಟುವಟಿಕೆಗಳ ಹೊರತಾಗಿ ಖಾಸಗಿ ಕಾರ್ಯಕ್ರಮಗಳಿಗೆ ನಗರದ ಹೈಸ್ಕೂಲ್ ಮೈದಾನವನ್ನು ನೀಡಿ ಕ್ರೀಡಾಪಟುಗಳಿಗೆ ತೊಂದರೆ ಮಾಡುತ್ತಿರುವ ಆಡಳಿತ ವ್ಯವಸ್ಥೆ ವಿರುದ್ಧ ಮಾರ್ನಿಂಗ್ ಸ್ಟಾರ್ ಫುಟ್‌ಬಾಲ್ ಕ್ಲಬ್ನಿಂದ ಭಾನುವಾರ ನಗರಪಾಲಿಕೆ ಎದುರಿನ ಪಿಬಿ ರಸ್ತೆಯಲ್ಲಿ ಕ್ರಿಕೆಟ್, ಫುಟ್‌ಬಾಲ್ ಆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.
ಹೈಸ್ಕೂಲ್ ಮೈದಾನದಲ್ಲಿ ನಿತ್ಯ ಸಾವಿರಾರು ಕ್ರೀಡಾಪಟುಗಳು ಫುಟ್‌ಬಾಲ್, ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಸೇರಿ ಇತರೆ ಕ್ರೀಡೆಗಳನ್ನು ಆಡುತ್ತಿದ್ದಾರೆ. ಕೆಲ ವರ್ಷಗಳಿಂದ ಹೈಸ್ಕೂಲ್ ಮೈದಾನದ ಆಡಳಿತ ಮಂಡಳಿಯವರು ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕ್ರೀಡಾಪಟು ವೀರೇಶ್ ಮಾತನಾಡಿ, ಖಾಸಗಿಯವರಿಗೆ ಹಣದಾಸೆಗೆ ಬಾಡಿಗೆ ನೀಡಿ ಹೈಸ್ಕೂಲ್ ಮೈದಾನವನ್ನು ಹಾಳುಗೆಡವಿದರೆ, ಆಟೋಟಗಳಿಗೆ ಅಡ್ಡಿ ಮಾಡಿದರೆ ಉಗ್ರ ಹೋರಾಟ ನಿಶ್ಚಿತ ಎಂದರು
ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು. ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಮತಟ್ಟಾದ ಮೈದಾನವನ್ನು ಹಾಳು ಮಾಡಲಾಗುತ್ತಿದೆ. ಇದರಿಂದ ಆಟ ಮಾತ್ರವಲ್ಲದೆ ಹಿರಿಯರ ವಾಯುವಿಹಾರಕ್ಕೂ ಸಮಸ್ಯೆಯಾಗಿದೆ. ಮೈದಾನದ ಜಾಗ ಕಬಳಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಹೇಳಿದರು.
ಮಂಜುನಾಥ ಕುಕ್ಕುವಾಡ ಮಾತನಾಡಿ, ಬಸ್ ನಿಲ್ದಾಣ, ಪಟಾಕಿ ಮಾರಾಟಕ್ಕೆ ಅವಕಾಶ ಸೇರಿ ಅನೇಕ ರಾಜಕೀಯ ಕಾರ್ಯಕ್ರಮಗಳು, ಪ್ರದರ್ಶನಗಳಿಗೆ ಮೈದಾನ ಬಳಕೆ ಆಗುತ್ತಿರುವುದು ಸರಿಯಲ್ಲ. ಮೈದಾನದ ಮೇಲೆ ರಾಜಕೀಯ ಪ್ರಭಾವವಿದೆ. ಹೈಸ್ಕೂಲ್ ಮೈದಾನ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸಲಾಗುವುದು ಎಂದರು.
ಕಾಂತರಾಜ್, ನೂರ್ ಅಹಮದ್, ನಯಾಜ್ ಅಹ್ಮದ್, ಯೂಸೂಫ್, ಆನಂದ್ ಇತರೆ ಕ್ರೀಡಾಪಟುಗಳಿದ್ದರು.
--