

ಜಗಳೂರು: ಉತ್ತಮ ವೈದ್ಯಕೀಯ ಸೇವೆ ಜತೆಗೆ ಜನರೂ ಜಾಗೃತರಾದ್ದರಿಂದ ಜಿಲ್ಲೆ ಮತ್ತು ತಾಲೂಕಿನಲ್ಲಿ ಕರೊನಾ ಸೋಂಕಿನ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿ ಪ್ರಗತಿ ಹಂತದಲ್ಲಿರುವ ರ‌್ಯಾಂಪ್ ಅಳವಡಿಕೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಕರೊನಾ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕಳಿಸದೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುವಂತಾಗಬೇಕೆನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿಯೇ ಇಲ್ಲಿನ ಸಿಬ್ಬಂದಿಯನ್ನು ಬೇರೆಡೆಗೆ ಬಳಸಿಕೊಳ್ಳುತ್ತಿಲ್ಲ. ಆಸ್ಪತ್ರೆಗೆ ಏನೇನು ಅವಶ್ಯವಿದೆ ಎಂಬುದನ್ನು ಪಟ್ಟಿಮಾಡಿ ಕೊಡಿ. ಅದನ್ನು ಒದಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನೀರಜ್‌ಗೆ ಸೂಚಿಸಿದರು.
ಕೋವಿಡ್ ಆಸ್ಪತ್ರೆ ಹೊರಭಾಗದಿಂದ ಸೋಂಕಿತರನ್ನು ಕರೆ ತರಲು ರ‌್ಯಾಂಪ್ ನಿರ್ಮಾಣ ಮಾಡಿದ್ದು ತುಂಬಾ ಸಹಕಾರಿಯಾಗಿದೆ. ಇದನ್ನು ನಾಳೆಯಿಂದಲೇ ಉಪಯೋಗಕ್ಕೆ ಮುಕ್ತಗೊಳಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ತಕ್ಷಣವೇ ಬಿಸಿನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಹಾಗೂ ಹೊಸದಾಗಿ ನಿರ್ಮಿಸಿರುವ ರ‌್ಯಾಂಪ್‌ಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ತಹಸೀಲ್ದಾರ್ ಡಾ. ನಾಗವೇಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ನೀರಜ್, ಡಾ. ಸಂಜಯ್, ಸಿಪಿಐ ದುರುಗಪ್ಪ, ಪಿಎಸ್‌ಐ ಉಮೇಶ್‌ಬಾಬು ಮತ್ತಿತರರಿದ್ದರು.